ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ನಿಧನ…

51
firstsuddi

ಉಡುಪಿ : ಹಿರಿಯ ಸಾಹಿತಿ, ಅಂಬಾತನಯ ಮುದ್ರಾಡಿ (88) ಅವರು ಇಂದು ನಿಧನರಾಗಿದ್ದಾರೆ.

1935ರ ಜೂನ್ 4ರಂದು ಕಾರ್ಕಳದ ಮುದ್ರಾಡಿಯಲ್ಲಿ ಜನಿಸಿದ ಅಂಬಾತನಯ ಮುದ್ರಾಡಿ ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ್. ಶಾಲಾ ವಿದ್ಯಾಭ್ಯಾಸ 8ನೇ ತರಗತಿಯವರೆಗೆ ಪಡೆದಿದ್ದರು. ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದ ವ್ಯಕ್ತಿತ್ವ ಅಂಬಾತನಯರವರದ್ದು.

ಶಿಕ್ಷಕ, ಹರಿದಾಸ, ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ ಪೂರ್ಣವಾದ ಸಾಧನೆಯನ್ನು ಮಾಡಿದ್ದ ಅವರು, ಸಮಾಜದ ಎಲ್ಲ ಮಂದಿಗೆ ಮನೆಯ ಸದಸ್ಯನಂತೆ ಇದ್ದು ಮಾರ್ಗದರ್ಶನ ಮಾಡಿದ್ದರು. ಇತ್ತೀಚೆಗೆ ನಡೆದ ಉಡುಪಿಯಲ್ಲಿ ಜರುಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಇದೇ ಅವರ ಕೊನೆಯ ಕಾರ್ಯಕ್ರಮವಾಗಿತ್ತು.

ಸಾಹಿತ್ಯ ಕೃಷಿಗಾಗಿ ಮುದ್ರಾಡಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಲಭಿಸಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ. ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ.

ಇಂದು ಸಂಜೆ ಮುದ್ರಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.