ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಜಾಮೀನು ಮಂಜೂರಾಗಿದೆ.
ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯ 4 ಸಾವಿರ ನಗದು ಶ್ಯೂರಿಟಿ ಅಥವಾ ಒಬ್ಬ ವ್ಯಕ್ತಿಯ ಶ್ಯೂರಿಟಿ, ತನಿಖಾಧಿಕಾರಿಗಳು ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಂತೋಷ್ ಇಂದು ಸಂಜೆ 7 ಗಂಟೆ ಬಳಿಕ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಹಳ್ಳಿಕಾರ್ ತಳಿಯ ಹಸುಗಳ ಸಂರಕ್ಷಣೆ ಮಾಡುವ ಮೂಲಕ ವರ್ತೂರು ಸಂತೋಷ್ ಖ್ಯಾತಿ ಗಳಿಸಿದ್ದರು. ಅದೇ ಆಧಾರದಲ್ಲಿ ಅವರು ಬಿಗ್ ಬಾಸ್ಗೆ ಆಯ್ಕೆ ಆಗಿದ್ದರು. ಕುತ್ತಿಗೆಯಲ್ಲಿ ಸಂತೋಷ್ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ರಾಮೋಹಳ್ಳಿ ಅರಣ್ಯಾಧಿಕಾರಿಗಳು ಸಂತೋಷ್ ಅವರನ್ನು ಬಂಧಿಸಿದ್ದರು.
ವರ್ತೂರು ಸಂತೋಷ್ ಬಂಧನದ ಬಳಿಕ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣ ಸಖತ್ ಸದ್ದು ಮಾಡಿತು. ಈ ಮೊದಲು ಹುಲಿ ಉಗುರು ಧರಿಸಿ ಕಾಣಿಸಿಕೊಂಡಿದ್ದ ಅನೇಕ ಸೆಲೆಬ್ರಿಟಿಗಳ ಫೋಟೋಗಳು ವೈರಲ್ ಆಗಿದ್ದು, ಅವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ಲಾಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.










