ಹೈದರಾಬಾದ್ ಗ್ಯಾಂಗ್‍ರೇಪ್ ಪ್ರಕರಣ ; ಶಾಸಕರ ಪುತ್ರ ಸೇರಿದಂತೆ 6 ಮಂದಿಯ ಬಂಧನ…

54
firstsuddi

ಹೈದರಾಬಾದ್ : ಮೇ 28ರಂದು ಕಾರಿನಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಪುತ್ರ ಸೇರಿದಂತೆ ಎಲ್ಲಾ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ 6 ಮಂದಿಯ ಪೈಕಿ ನಾಲ್ವರು ಬಾಲಾರೋಪಿಗಳಾಗಿದ್ದು, ಮತ್ತೊಬ್ಬ ವಯಸ್ಕ ಆರೋಪಿಯನ್ನು ಸದುದ್ದೀನ್ ಮಲಿಕ್ (18) ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 323 (ಆಘಾತ ಉಂಟುಮಾಡಲು ಕಾರಣರಾಗುವುದು), 366 (ಅಪಹರಣ) ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ವಿಡಿಯೊ ಚಿತ್ರೀಕರಣ ಮಾಡಿದ ಆರೋಪದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಅವರು, ಶಾಸಕರ ಪುತ್ರ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ, ಆದರೆ ಇನ್ನೋವಾದಲ್ಲಿ ಅಪರಾಧ ನಡೆಯುವುದಕ್ಕೂ ಮೊದಲು, ಶಾಸನನ ಪುತ್ರ ಕಾರಿನಲ್ಲಿ ಸಂತ್ರಸ್ತೆಯ ಜೊತೆಯಲ್ಲಿದ್ದಾಗ ಕಿರುಕುಳ ನೀಡಿದ್ದಾನೆ. ನಂತರ ಆತನ ಜೊತೆಗಿದ್ದ ಮೂವರು ಸ್ನೇಹಿತರು ಆಕೆಗೆ ಕಿರುಕುಳ ನೀಡಿದ್ದಾರೆ. ಬಾಲಕಿಯ ಕುತ್ತಿಗೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ಅಪರಾಧದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣವನ್ನು ಬಲಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.