ಮರಿಯಮ್ಮನಹಳ್ಳಿ,- ಮರಿಯಮ್ಮನಹಳ್ಳಿಗೆ ಸಮೀಪದ ಡಣಾಯಕನಕೆರೆ ಗ್ರಾಮ ಪಂಚಾಯಿತಿಗೆ ನಡೆದ ಮೊದಲ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತನ್ನದಾಗಿಸಿಕೊಂಡಿದ್ದಾರೆ.
ಡಣಾಯಕನಕೆರೆ ಗ್ರಾಮ ಪಂಚಾಯಿತಿಯು ಒಟ್ಟು 19 ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನವು ಪ.ಪಂ ಮಹಿಳಾ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಪುರುಷನಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಒಬ್ಬ ಅಭ್ಯರ್ಥಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬ ಮಹಿಳಾ ಅಭ್ಯರ್ಥಿಯು ಸ್ಪರ್ಧಿಸಿದ್ದರು.
ನಿನ್ನೆ ನಡೆದ ಆಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಇಂದಿರಾನಗರದ ಸದಸ್ಯೆ ಪಿ ಅಕ್ಕಮಹಾದೇವಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಬೆಂಬಲಿತ ಸದಸ್ಯ ಉಪ್ಪಾರ ವೆಂಕಟೇಶ ಅವಿರೋಧವಾಗಿ ಆಯ್ಕೆಯಾದರು. ಇತರೆ ಯಾವ ಸದಸ್ಯರೂ ನಾಮಪತ್ರ ಸಲ್ಲಿಸದ ಕಾರಣ ನಾಮ ಪತ್ರ ಸಲ್ಲಿಸಿದ ಇಬ್ಬರು ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿ ಹೊಸಪೇಟೆ ನಗರಸಭೆಯ ಪೌರಾಯುಕ್ತ ಮನ್ಸೂರ್‌ಅಲಿ ಘೋಷಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನೇಮಿರಾಜ್ ನಾಯ್ಕ್, ಮುಖಂಡರಾದ ಕೃಷ್ಣನಾಯ್ಕ್, ಪ್ರಕಾಶ್ ಪೂಜಾರ್, ಬಿಜೆಪಿ ಮಂಡಲ ಅಧ್ಯಕ್ಷ ವೀರೇಶ್ ಸ್ವಾಮಿ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ನವೀನ್ ಕುಮಾರ್, ಗುಂಡಾ ಸ್ವಾಮಿ, ನಂದಿಬಂಡಿ ಜಗದೀಶ್, ಪೋತಲಕಟ್ಟಿ ಕಿರಣ ಹಾಗೂ ಇತರರು ಇದ್ದರು.










