ಚಿಕ್ಕಮಗಳೂರು : ಅಂಗಡಿ ಮುಂಗಟ್ಟುಗಳು ಮತ್ತು ಕೈಗಾರಿಕೆ, ಉದ್ದಿಮೆಗಳ ಪರವಾನಗಿ ಶುಲ್ಕದ ಮೊತ್ತವನ್ನು ಕಡಿಮೆ ಮಾಡುವಂತೆ ಚಿಕ್ಕಮಗಳೂರು ಛೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿಗಳು ನಗರಸಭೆಯನ್ನು ಒತ್ತಾಯಿಸಿದ್ದಾರೆ.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಇಂದು ಭೇಟಿ ಮಾಡಿದ ಸಂಸ್ಥೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿ ಪರವಾನಗಿ ಶುಲ್ಕವನ್ನು ಏಕಾಏಕಿ ಹೆಚ್ಚಳ ಮಾಡಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.
ಕಳೆದ ಮೂರು ವರ್ಷಗಳಿಂದ ಕೊರೋನಾ ಲಾಕ್ಡೌನ್ನಿಂದಾಗಿ ವ್ಯವಹಾರವಿಲ್ಲದೇ ವ್ಯಾಪಾರಸ್ಥರು, ಉದ್ದಿಮೆದಾರರು ಆರ್ಥಿಕ ಸಂಕಷ್ಟದಲ್ಲಿದ್ದು, ನಗರಸಭೆ ಏಕಾಏಕಿ ಪರವಾನಗಿ ಶುಲ್ಕವನ್ನು ಏರಿಸಿರುವುದು ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರು, ಕೈಗಾರಿಕೆಗಳು ಮತ್ತು ಉದ್ದಿಮೆಗಳ ಪರವಾನಗಿ ಶುಲ್ಕವನ್ನು ಹೆಚ್ಚಳ ಮಾಡುವ ವೇಳೆ ಛೇಂಬರ್ ಆಫ್ ಕಾಮರ್ಸ್ನ ಗಮನಕ್ಕೆ ತರಬೇಕು, ವ್ಯಾಪಾರೋದ್ಯಮಿಗಳ ಸಂಘ ಸಂಸ್ಥೆಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಂಗಡಿ ಮುಂಗಟ್ಟುಗಳು ಮತ್ತು ಕೈಗಾರಿಕೆ ಉದ್ದಿಮೆಗಳ ಪರವಾನಗಿಯನ್ನು ಪ್ರತಿ ವರ್ಷ ನವೀಕರಿಸುವ ಬದಲು ಐದು ವರ್ಷದ ಅವಧಿಗೆ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದರು.
ಚಿಕ್ಕಮಗಳೂರು ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಆರ್.ಎಂ.ಮಹೇಶ್, ನಿರ್ದೇಶಕರಾದ ಆನಂದ್ಕುಮಾರ್ ಶೆಟ್ಟಿ, ಗೌತಂಚಂದ್ ಜೈನ್, ಕುಮಾರಸ್ವಾಮಿ, ಶ್ರೀನಿವಾಸರಾವ್ ಹಾಜರಿದ್ದರು.










