ಡೆಹ್ರಾಡೂನ್ : ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದಡಿ ಐಎಎಸ್ ಅಧಿಕಾರಿ ರಾಮ್ ವಿಲಾಸ್ ಯಾದವ್ ಅವರನ್ನು ನಿನ್ನೆ ವಿಚಾರಣೆ ನಡೆಸಿದ ನಂತರ ತಡರಾತ್ರಿ ರಾಜ್ಯ ವಿಜಿಲೆನ್ಸ್ ಇಲಾಖೆ ಬಂಧಿಸಿದೆ.
ರಾಮ್ ವಿಲಾಸ್ ಆದಾಯ ಮೂಲಗಳಿಗಿಂತಲೂ ಅಧಿಕ ಆಸ್ತಿಯನ್ನು ಸಂಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಇದೀಗ ಅಧಿಕಾರಿಗಳು ರಾಮ್ ವಿಲಾಸ್ ಅವರನ್ನು ಅಮಾನತುಗೊಳಿಸಿ ಬಂಧಿಸಿದ್ದಾರೆ.
ಹೈಕೋರ್ಟ್ ಆದೇಶದ ಮೇರೆಗೆ ರಾಮ್ ವಿಲಾಸ್ ಯಾದವ್ ನಿನ್ನೆ ಮಧ್ಯಾಹ್ನ ತಮ್ಮ ವಕೀಲರೊಂದಿಗೆ ಖಾಸಗಿ ಕಾರಿನಲ್ಲಿ ಡೆಹರಾಡೂನ್ ನ ವಿಜಿಲೆನ್ಸ್ ಕಚೇರಿಗೆ ಆಗಮಿಸಿದ್ದರು. ಅಲ್ಲಿ ಅವರನ್ನು ಸುಮಾರು 14 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ರಾಜ್ಯ ವಿಜಿಲೆನ್ಸ್ ವಿಭಾಗದ ನಿರ್ದೇಶಕ ಅಮಿತ್ ಸಿನ್ಹಾ ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮತ್ತು ಉತ್ತರಾಖಂಡ್‌ನ ಎಲ್‌ಡಿಎ ಮಾಜಿ ಕಾರ್ಯದರ್ಶಿ ರಾಮ್ ವಿಲಾಸ್ ಯಾದವ್ ವಿರುದ್ಧ ಪ್ರಕರಣ ದಾಖಲಾದ ನಂತರ, ಲಖನೌದ ಪುರ್ನಿಯಾದಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿತ್ತು. ಇದಲ್ಲದೇ ಯುಪಿಯ ಘಾಜಿಪುರ ಮತ್ತು ಗಾಜಿಯಾಬಾದ್ ಸ್ಥಳಗಳ ಮೇಲೂ ದಾಳಿ ಮಾಡಲಾಗಿತ್ತು.










