ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ- 11 ಮಂದಿ ಬಲಿ, 40 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ…

65
firstsuddi

ಭೋಪಾಲ್: ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಬೈರಾಗರ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 40 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ.

ಪಟಾಕಿ ಕಾರ್ಖಾನೆಯ ಸ್ಫೋಟದ ತೀವ್ರತೆಗೆ ಸುಮಾರು ಅರವತ್ತು ಮನೆಗಳು ನಾಶವಾಗಿವೆ. ಕಾರ್ಖಾನೆಯಲ್ಲಿ ನಿರಂತರ ಸ್ಫೋಟಗಳು ಸಂಭವಿಸಿದ ಕಾರಣ 100ಕ್ಕೂ ಹೆಚ್ಚು ಮನೆಗಳಲ್ಲಿದ್ದ ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ನಂದಿಸಲು ಇಂದೋರ್ ಮತ್ತು ಭೋಪಾಲ್‍ನಿಂದ ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ.

ಆರಂಭದಲ್ಲಿ ಅಗ್ನಿ ಅವಘಡದಲ್ಲಿ ಆರು ಜನರು ಸಾವನ್ನಪ್ಪಿದ್ದರು. ಇದೀಗ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಧಾರ್ಮಿಕ ಹಬ್ಬಗಳು ಮತ್ತು ಮದುವೆ ಸಮಾರಂಭಗಳಲ್ಲಿ ಬಳಸುವ ಪಟಾಕಿಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದ್ದು. ಜನರು ಸರಿಯಾದ ಸುರಕ್ಷತಾ ಕ್ರಮಗಳಿಲ್ಲದೆ ತಾತ್ಕಾಲಿಕ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದರಿಂದ ಪ್ರತಿ ವರ್ಷ ಇಂತಹ ಮಾರಣಾಂತಿಕ ಅಪಘಾತಗಳು ಸಂಭವಿಸುತ್ತಲೇ ಇದೆ.