ಅಗ್ನಿಪಥ್ ಯೋಜನೆಗೆ ವಿರೋಧ – ಇಂದು ಬಿಹಾರ್ ಬಂದ್.

67
firstsuddi

ಪಾಟ್ನಾ: ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ ವಿರೋಧಿಸಿ ಬಿಹಾರ ವಿದ್ಯಾರ್ಥಿ ಸಂಘಟನೆಗಳು ಇಂದು ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿದ್ದಾರೆ. ಈ ಬಂದ್ ಗೆ ಆರ್ ಜೆಡಿ, ಮಹಾಘಟಬಂಧನ್ ಜೊತೆಗೆ ವಿಐಪಿಗಳೂ ಬೆಂಬಲ ನೀಡಿದ್ದಾರೆ.

ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿವೆ. ಕಳೆದ ಮೂರು ದಿನಗಳಲ್ಲಿ ಬಿಹಾರದ ಹಲವೆಡೆ ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಜನರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬಿಹಾರ ಬಂದ್ ಗೆ ಆರ್ ಜೆಡಿ ನೈತಿಕ ಬೆಂಬಲ ನೀಡುತ್ತದೆ ಎಂದು ಆರ್ ಜೆಡಿ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್ ಹೇಳಿದರು.

ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಕೇಂದ್ರ ಸರ್ಕಾರವು ತಕ್ಷಣವೇ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು. ಗುತ್ತಿಗೆ ಆಧಾರದ ಮೇಲೆ ಸೇನೆಯ ಕೆಲಸವನ್ನೂ ನೀಡುತ್ತಿರುವ ಈ ಸರ್ಕಾರ ಗುತ್ತಿಗೆದಾರರಿಂದ ಆಯ್ಕೆಯಾಗಿದೇಯಾ? ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.

ಸೇನಾ ನೇಮಕಾತಿಗೆ ಹೊಸ ಯೋಜನೆಯಾದ ಅಗ್ನಿಪಥ್ ಬಗ್ಗೆ ಯುವಕರಲ್ಲಿ ಆಕ್ರೋಶ ಮೂಡಿದೆ. ದೇಶಕ್ಕೆ ಸೇವೆ ಸಲ್ಲಿಸುವ ಕನಸನ್ನು ಹೊತ್ತ ಸಾವಿರಾರೂ ಯುವಕರು ಇಂದು ರಸ್ತೆಗಿಳಿದಿದ್ದಾರೆ. ನಿರಂತರ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಇನ್ನೂ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿಲ್ಲ. ಸರ್ಕಾರದ ಹಠಮಾರಿ ಧೋರಣೆ ವಿರೋಧಿಸಿ ಇಂದು ಬಿಹಾರ ವಿಐಪಿ ಬಂದ್ ಗೆ ನೈತಿಕ ಬೆಂಬಲ ನೀಡಲಾಗುವುದು ಎಂದು ವಿಐಪಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಚಿವ ಮುಖೇಶ್ ಸಾಹ್ನಿ ಹೇಳಿದರು.