ಅತೀಕ್ ಅಹ್ಮದ್ ಸಮಾಧಿ ಮೇಲೆ ತ್ರಿವರ್ಣ ಧ್ವಜ ಹಾಕಿದ ಕಾಂಗ್ರೆಸ್ ನಾಯಕನ ಬಂಧನ…

68
firstsuddi

ಲಕ್ನೋ : ಹತ್ಯೆಯಾದ ಗ್ಯಾಂಗ್‌ಸ್ಟರ್‌ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಸಮಾಧಿ ಮೇಲೆ ರಾಷ್ಟ್ರ ಧ್ವಜವನ್ನು ಹಾಕಿದ ಕಾಂಗ್ರೆಸ್ ನ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.

ಓಲ್ಡ್ ಸಿಟಿ ಪ್ರದೇಶದ ಕಸರಿ ಮಸಾರಿ ಸ್ಮಶಾನದಲ್ಲಿ ಅತೀಕ್ ಸಮಾಧಿಯಿದೆ. ಅಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಸಿಂಗ್ ರಜ್ಜು ಅತೀಕ್ ಸಮಾಧಿ ಮೇಲೆ ರಾಷ್ಟ್ರಧ್ವಜವನ್ನು ಹಾಕಿ ಅತೀಕ್ ನನ್ನು ಹುತಾತ್ಮ ಎಂದು ಕರೆದಿದ್ದಾನೆ. ಅತೀಕ್ ಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ವಿಡಿಯೋದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿ ಕಾಂಗ್ರೆಸ್ ನಾಯಕನನ್ನು ಬಂಧಿಸಿದ್ದಾರೆ. ಈ ನಡುವೆ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಮಿಶ್ರಾ ಅಂಶುಮಾನ್ ಮಾತನಾಡಿ, ರಾಜ್‌ಕುಮಾರ್ ನನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಲಾಗಿದೆ. ಅತಿಕ್ ಬಗೆಗಿನ ರಜ್ಜು ಹೇಳಿಕೆಗಳು ಹಾಗೂ ಕೃತ್ಯಗಳು ಆತನ ವೈಯಕ್ತಿಕ ದೃಷ್ಟಿಕೋನದ್ದಾಗಿದೆ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಉಮೇಶ್ ಪಾಲ್ ಹತ್ಯೆ ಆರೋಪ ಪ್ರಕರಣದಲ್ಲಿ ಅತೀಕ್ ಅಹ್ಮದ್ ನನ್ನು ಬಂಧಿಸಲಾಗಿತ್ತು. ಏಪ್ರಿಲ್ 15ರಂದು ಪ್ರಯಾಗ್ರಾಜ್ ನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಕರೆತಂದಿದ್ದ ವೇಳೆ ಅತೀಕ್ ಮತ್ತು ಅವರ ಸಹೋದರ ಅಶ್ರಫ್ ನನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಭಯಾನಕ ಹತ್ಯೆಯ ದೃಶ್ಯಾವಳಿಗಳು ಆಸ್ಪತ್ರೆಯ ಹೊರಗಡೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.