ಅತ್ತಿಬೆಲೆ ಪಟಾಕಿ ದುರಂತ- ನಾಲ್ವರು ಅಧಿಕಾರಿಗಳ ಅಮಾನತು…

66
firstsuddi

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಆನೇಕಲ್ ತಾಲೂಕಿನ ಹಿಂದಿನ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಉಪ ತಹಶೀಲ್ದಾರ್ ಶ್ರೀಧರ್, ರಾಜಸ್ವ ನಿರೀಕ್ಷಕ ಅತ್ತಿಬೆಲೆ, ಗ್ರಾಮ ಆಡಳಿತಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಅತ್ತಿಬೆಲೆ ಅಗ್ನಿ ಅವಘಡಕ್ಕೆ ಅಧಿಕಾರಿಗಳೇ ಹೊಣೆ ಎಂದು ವರದಿ ಬಂದಿತ್ತು. ಪಟಾಕಿ ಅಂಗಡಿಗೆ 1ಸಾವಿರ ಕೆ.ಜಿ ಮಾತ್ರ ಸ್ಟಾಕ್ ಇಡಲು ಅವಕಾಶ ನೀಡಲಾಗಿತ್ತು. ಪರವಾನಿಗೆ ನೀಡುವಾಗ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಪರವಾನಿಗೆ ನೀಡಿರುವ ಹಿನ್ನಲೆಯಲ್ಲಿ ಈ ಅವಘಡಕ್ಕೆ ಕಾರಣವೆಂದು 4 ಜನ ಅಧಿಕಾರಿಗಳನ್ನ ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ.

ಈ ಪ್ರಕರಣದಲ್ಲಿ ಇನ್ನಷ್ಟು ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಪೊಲೀಸ್ ಮತ್ತು ಅಗ್ನಿಶಾಮಕ ಠಾಣೆ ಇಲಾಖೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಸಾಧ್ಯತೆಗಳಿವೆ.

ನಿನ್ನೆ ಅಮಾನತಿನ ಬಗ್ಗೆ ಡಿಸಿ, ಎಸ್‍ಪಿಗೆ ಸಿಎಂ ಸೂಚನೆ ನೀಡಿದ್ದರು. ಸಿಎಂ ಸೂಚನೆ ಬೆನ್ನಲ್ಲೆ ಇದೀಗ ಡಿಇ ಕಾಯ್ದಿರಿಸಿ ಪಾರದರ್ಶಕವಾದ ವರದಿ ನೀಡದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದ ಮೇಲೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಘಟನೆಯ ವಿವರ:
ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಶನಿವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮೃತಪಟ್ಟ ಕಾರ್ಮಿಕರ ಪೈಕಿ ಬಹುತೇಕರು ತಮಿಳುನಾಡಿನ ಶಿವಕಾಶಿ ಮೂಲದವರು ಎಂದು ತಿಳಿದು ಬಂದಿದೆ. ಇನ್ನು ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲೀಕರಾದ ರಾಮಸ್ವಾಮಿ ರೆಡ್ಡಿ ಹಾಗೂ ಜಾಗದ ಮಾಲೀಕ ಅನಿಲ್ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 338, 304 ಅಡಿ ಎಫ್ಐಆರ್ ದಾಖಲಾಗಿದೆ.

ಶನಿವಾರ ಮಧ್ಯಾಹ್ನ 3.30ಕ್ಕೆ ಲಾರಿಯಿಂದ ಪಟಾಕಿ ಇಳಿಸಲಾಗುತ್ತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ.