ಅತ್ಯಾಚಾರ ಕೇಸ್ – ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಕ್ಲೀನ್​ಚಿಟ್…

53
firstsuddi

ತಿರುವನಂತಪುರಂ : ಸೋಲಾರ್ ಹಗರಣದ ಪ್ರಮುಖ ಆರೋಪಿ ಮಹಿಳೆಯೊಬ್ಬರು ಮಾಡಿರುವ ಅತ್ಯಾಚಾರ ಆರೋಪದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ.

2012ರಲ್ಲಿ ಸೋಲಾರ್ ಫಲಕವನ್ನು ಅಳವಡಿಕೆ ಮಾಡುವ ಬಗ್ಗೆ ಮಾತುಕತೆ ನಡೆಸಲು ಹೋಗಿದ್ದಾಗ ಸಿಎಂ ಆಗಿದ್ದ ಉಮ್ಮನ್ ಚಾಂಡಿ ತಮ್ಮ ಮನೆಯಲ್ಲೇ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸೋಲಾರ್ ಶಕ್ತಿ ಹಗರಣದ ಆರೋಪಿ ಸರಿತಾ ನಾಯರ್ ಆರೋಪಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕೇರಳದ ಕ್ರೈಂ ಬ್ರಾಂಚ್ ವಿಭಾಗದ ಪೊಲೀಸರು ಉಮ್ಮನ್ ಚಾಂಡಿ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು. ಸೋಲಾರ್ ಹಗರಣದಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಆರೋಪಿ ಬಿಜು ರಾಧಾಕೃಷ್ಣನ್ ಕೂಡ ಮಾಜಿ ಸಿಎಂ ಉಮ್ಮನ್ ಚಾಂಡಿ ಮೇಲೆ ಇದೇ ರೀತಿಯ ಆರೋಪ ಮಾಡಿದ್ದರು.

ಸೋಲಾರ್ ಫಲಕಗಳನ್ನು ಅಳವಡಿಸುವ ಹಗರಣಕ್ಕೆ ಸಂಬಂಧಿಸಿದಂತೆ ಅಂದು ಸಿಎಂ ಆಗಿದ್ದ ಉಮ್ಮನ್ ಚಾಂಡಿ ಸರ್ಕಾರಕ್ಕೆ ಸುಮಾರು 2 ಕೋಟಿ ರೂ. ಲಂಚ ನೀಡಿದ್ದಾಗಿ ಸರಿತಾ ಮತ್ತು ಬಿಜು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಸೋಲಾರ್ ಹಗರಣದ ಮುಖ್ಯ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಮತ್ತು ಸರಿತಾ ನಾಯರ್ ಅವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಕಳೆದ ವರ್ಷ, ಆರೋಪಿ ಮಹಿಳೆಯ ಲೈಂಗಿಕ ಶೋಷಣೆ ಆರೋಪಗಳಿಗೆ ಸಂಬಂಧಿಸಿದಂತೆ ಉಮ್ಮನ್ ಚಾಂಡಿ, ಮಾಜಿ ಕೇಂದ್ರ ಸಚಿವ ಕೆಸಿ ವೇಣುಗೋಪಾಲ್ ಮತ್ತು ಇತರ ರಾಜಕಾರಣಿಗಳ ವಿರುದ್ಧದ ಪ್ರಕರಣಗಳ ತನಿಖೆಯನ್ನು ಸಿಬಿಐ ವಹಿಸಿಕೊಂಡಿತ್ತು.

ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರವು 2021ರ ಆರಂಭದಲ್ಲಿ ಈ ಪ್ರಕರಣಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಇದೀಗ ಉಮ್ಮನ್ ಚಾಂಡಿ ವಿರುದ್ಧದ ಮಹಿಳೆಯ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಸಿಬಿಐ ಹೇಳಿದೆ.