ಜೈಪುರ : ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ನಂಬರ್ ಒನ್ ಆಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ನಮ್ಮ ರಾಜ್ಯ ಏಕೆ ಮುಂದಿದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ ರಾಜಸ್ಥಾನವು ಪುರುಷರು ಹೆಚ್ಚಾಗಿರುವ ರಾಜ್ಯವಾಗಿದೆ ಎಂದು ರಾಜಸ್ಥಾನ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಹೇಳಿದ್ದಾರೆ.
ಶಾಂತಿ ಧರಿವಾಲ್ ಅವರ ಅತ್ಯಾಚಾರ ಹೇಳಿಕೆ ಇದೀಗ ಭಾರೀ ವಿವಾದವನ್ನು ಸೃಷ್ಟಿಸಿದ್ದು, ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ, ವಕ್ತಾರ ಶೆಹಜಾದ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಖಂಡಿಸಿದ್ದಾರೆ.
ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ಈ ಕುರಿತಂತೆ ಟ್ವೀಟ್ ಮಾಡಿದ್ದು, ಇಂಥ ಮಾತುಗಳನ್ನಾಡುವ ಮೂಲಕ ಧರಿವಾಲ್ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಮತ್ತು ಪುರುಷರ ಗೌರವವನ್ನೂ ಕುಗ್ಗಿಸಿದ್ದಾರೆ. ರಾಜಸ್ಥಾನ ಅತ್ಯಾಚಾರ ಪ್ರಕರಣಗಳಲ್ಲಿ ನಂಬರ್ 1 ಸ್ಥಾನದಲ್ಲಿದೆ ಎಂಬುದೇ ನಾಚಿಕೆಗೇಡಿನ ವಿಷಯ. ಅದನ್ನು ಇಷ್ಟು ನಗುತ್ತ, ತಮಾಷೆ ಮಾಡುತ್ತ ಹೇಳುವುದು ಇನ್ನೂ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಟ್ವೀಟ್ ಮಾಡಿ, ರಾಜಸ್ಥಾನ ಸರ್ಕಾರದಲ್ಲಿ ಇಂಥ ಸಚಿವರು ಇರುವುದರಿಂದಲೇ ಮಹಿಳೆಯರ ಮೇಲಿನ ದೌರ್ಜನ್ಯ ಮಿತಿಮೀರಿದೆ. ಇಂಥವರು ಇರುವ ನಾಡಿನಲ್ಲಿ ಮಹಿಳೆಯರು ಹೇಗೆ ಸುರಕ್ಷಿತರಾಗಿರುತ್ತಾರೆ. ನಮ್ಮ ಆಯೋಗ ಧರಿವಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.










