ನವದೆಹಲಿ : ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಮಳೆಗಾಲದ ರಾಜ್ಯಸಭಾ ಕಲಾಪದ ಅಧಿವೇಶನದಿಂದ 19 ಸಂಸದರನ್ನು ಒಂದು ವಾರದವರೆಗೆ ಅಮಾನತುಗೊಳಿಸಲಾಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಂಡ ಬಳಿಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಅರ್ಪಿಸಿದ ತಕ್ಷಣ, ಪ್ರತಿಪಕ್ಷಗಳ ಸದಸ್ಯರು ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ದರ ಏರಿಕೆಯ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಭಿತ್ತಿ ಪತ್ರಗಳನ್ನು ಹಿಡಿದು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದರು. ಹೀಗಾಗಿ, ಸಭಾಪತಿ ಈ ನಿರ್ಧಾರ ಕೈಗೊಂಡಿದ್ದಾರೆ.
ಸುಶ್ಮಿತಾ ದೇವ್, ಮೌಸಮ್ ನೂರ್, ಶಾಂತಾ ಛೆಟ್ರಿ, ದೋಲಾ ಸೇನ್, ಸಂತಾನು ಸೇನ್, ಅಭಿ ರಂಜನ್ ಬಿಸ್ವರ್,
ಎಂಡಿ ನಾದಿಮುಲ್ ಹಕ್, ಎಂ ಹಮಮದ್ ಅಬ್ದುಲ್ಲಾ, ಬಿ ಲಿಂಗಯ್ಯ ಯಾದವ್, ಎ.ಎ. ರಹೀಮ್, ರವಿಹಂದ್ರ ವಡ್ಡಿರಾಜು, ಎಸ್ ಕಲ್ಯಾಣಸುಂದರಂ, ಆರ್ ಗಿರಂಜನ್, ಎನ್ ಆರ್ ಇಲಾಂಗೋ, ವಿ ಶಿವದಾಸನ್, ಎಂ ಷಣ್ಮುಗಂ,
ದಾಮೋದರ ರಾವ್ ದಿವಕೊಂಡ, ಸಂತೋಷ್ ಕುಮಾರ್ ಪಿ, ಕನಿಮೊಳಿ ಎನ್ವಿಎನ್ ಸೋಮು ಅಮಾನತುಗೊಂಡವರು.
ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಸಂಸದರು ಕಳೆದ ಹಲವು ದಿನಗಳಿಂದ ಬೆಲೆ ಏರಿಕೆ ಮತ್ತು ಜಿಎಸ್ಟಿ ಹೆಚ್ಚಳದಂತಹ ವಿಷಯಗಳ ಕುರಿತು ತುರ್ತು ಚರ್ಚೆಗೆ ಒತ್ತಾಯಿಸುತ್ತಿದ್ದಾರೆ. ಇದು ಸದನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿದೆ. ನಿಯಮ 267 (ರಾಜ್ಯಸಭೆಯಲ್ಲಿ ವ್ಯವಹಾರದ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳು) ಅಡಿಯಲ್ಲಿ ಚರ್ಚೆಗಳನ್ನು ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.










