ಅನಗತ್ಯವಾಗಿ ಫ್ರೀ ಟಿಕೆಟ್ ಹರಿದು ಬಿಸಾಡಿದ ಬಿಎಂಟಿಸಿ ಕಂಡಕ್ಟರ್ ಅಮಾನತು…

71
firstsuddi

ಬೆಂಗಳೂರು: ಅನಗತ್ಯವಾಗಿ ಉಚಿತ ಟಿಕೆಟ್​ಗಳನ್ನು ಬಿಎಂಟಿಸಿ ಬಸ್ ಕಂಡಕ್ಟರ್, ಹರಿದು ಬಿಸಾಡುವ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ಕಂಡಕ್ಟರ್​ನನ್ನು ಅಮಾನತುಗೊಳಿಸಿದ್ದಾರೆ.

ಮೆಜೆಸ್ಟಿಕ್​​​​ನಿಂದ ತಾವರಕೆರೆ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಅರ್ಜುನ್ ಕೊಟ್ಯಾಳ ಅಮಾನತುಗೊಂಡ ಕಂಡಕ್ಟರ್. ಡಿಪೋ-17 ಮಾರ್ಗದ ಸಂಖ್ಯೆ-242B ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್ ಆಗಿದ್ದ ಅರ್ಜುನ್ ನಿನ್ನೆ ಬಸ್​ನಲ್ಲಿ ಮಹಿಳೆಯರಿಗೆ ನೀಡಬೇಕಿದ್ದ ಉಚಿತ ಟಿಕೆಟ್ ಹರಿದು ಎಸೆಯುತ್ತಿದ್ದರು.

ಈ ಸಂಬಂಧ ಅಧಿಕಾರಿಗಳು ಅರ್ಜುನ್ ಅವರನ್ನು ಬಿಎಂಟಿಸಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಅರ್ಜುನ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಅಲ್ಲದೆ, ಈ ರೀತಿ ಕೆಲಸ ಮತ್ತೊಮ್ಮೆ ಆಗದಂತೆ ಇತರೆ ಕಂಡಕ್ಟರ್​ಗಳಿಗೂ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಕಂಡಕ್ಟರ್ ಎಲೆಕ್ಟ್ರಿಕ್ ಟಿಕೆಟಿಂಗ್ ಯಂತ್ರದಿಂದ ಶಕ್ತಿ ಯೋಜನೆಯಡಿ ಟಿಕೆಟ್‌ಗಳನ್ನು ಹರಿದು ಹರಿದು, ಕಿಟಕಿಯಿಂದ ಹೊರಗೆ ಎಸೆಯುವುದನ್ನು ಕಾಣಬಹುದು. ಮಹಿಳಾ ಪ್ರಯಾಣಿಕರೊಬ್ಬರು ಈ ಕೃತ್ಯವನ್ನು ವೀಡಿಯೋ ಮಾಡಿ ಕಂಡಕ್ಟರ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಂಡಕ್ಟರ್​​ಗಳು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಸಂಖ್ಯೆಗಳನ್ನು ನಿಗಮಗಳಿಗೆ ತಪ್ಪಾಗಿ ನೀಡುತ್ತಿದ್ದಾರೆ ಎಂಬ ಆರೋಪದ ನಡುವೆ ಇನ್ನು ಹೆಚ್ಚಿನ ಇನ್ಸೆಂಟಿವ್ ಆಸೆಗೆ ಬೇಕಾ ಬಿಟ್ಟಿಯಾಗಿ ಫ್ರೀ ಟಿಕೆಟ್​ಗಳನ್ನು ಹರಿದು ಎಸೆಯುತ್ತಿದ್ದಾಗ ಬಿಎಂಟಿಸಿ ಬಸ್ ಕಂಡಕ್ಟರ್ ಸಿಕ್ಕಿಬಿದ್ದಿದ್ದರು.