ಚಾಮರಾಜನಗರ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದ ‘ದಿ ಎಲೆಫೆಂಟ್ ವಿಸ್ಪರರ್ಸ್’ ಸಿನಿಮಾವನ್ನು ಹೋಲುವ ಘಟನೆ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ರಾಮಪುರ ಆನೆ ಶಿಬಿರದಲ್ಲಿ ನಡೆದಿದೆ. ಅನಾಥ ಹೆಣ್ಣು ಮರಿ ಆನೆಗೆ ಪೋಷಣೆ ಮಾಡಿ ದಂಪತಿ ಗಮನ ಸೆಳೆದಿದ್ದಾರೆ.
ಕಾವಾಡಿ ರಾಜು ಮತ್ತು ರಮ್ಯ ಎಂಬ ದಂಪತಿ 7 ತಿಂಗಳ ಹೆಣ್ಣು ಆನೆ ವೇದಾಳನ್ನು ಸ್ವಂತ ಮಗುತರ ಸಾಕಿ ಸಲಹುತ್ತಿದ್ದಾರೆ. ಅನಾಥ ಆನೆ ವೇದ ಅರೆಕ್ಷಣವು ರಾಜು ಹಾಗೂ ಆತನ ಪತ್ನಿಯನ್ನು ಬಿಟ್ಟಿರದು. ಎಲ್ಲಿ ಹೋದರೂ ಜೊತೆಗೇ ಹೋಗುತ್ತೆ. ಸದಾ ಸೀರೆಗೆ ಗಂಟಾಕಿಕೊಂಡಂತೆ ಅವರೊಂದಿಗೆಯೇ ಬದುಕುತ್ತಿದೆ. ವೇದ ಹುಟ್ಟಿದ 7 ದಿನಕ್ಕೆ ತಾಯಿಯಿಂದ ದೂರವಾಗಿದೆ. ಆಗಿನಿಂದಲು ಮರಿ ಹೆಣ್ಣಾನೆ ಪಾಲಿಗೆ ಕಾವಾಡಿ ದಂಪತಿಯೇ ತಂದೆ ತಾಯಿ. ವೇದಾಳನ್ನು ಸ್ವಂತ ಮಗಳಂತೆ ಪಾಲನೆ ಪೋಷಣೆ ಮಾಡ್ತಿದ್ದಾರೆ. ಒಟ್ಟಿನಲ್ಲಿ ಅನಾಥವಾಗಿದ್ದ ವೇದಾಳಿಗೆ ತಾಯಿಯ ಮಮತೆ ತಂದೆಯ ಪ್ರೀತಿ ಸಿಗುತ್ತಿದ್ದು, ರಾಜು-ರಮ್ಯರನ್ನು ಆನೆ ಮರಿ ಬಹಳ ಹಚ್ಚಿಕೊಂಡಿದೆ.
ಪ್ರತಿ ದಿನ 12 ಲೀಟರ್ ಹಾಲು ಕುಡಿಯುವ ವೇದ, ಕಾವಾಡಿ ದಂಪತಿಯ ಮುದ್ದು ಕೂಸಾಗಿದೆ. ದಂಪತಿಗಳ ನಿಸ್ವಾರ್ಥ ಸೇವೆಗೆ ಬಂಡಿಪುರ ಅರಣ್ಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮರಿಯಾನೆ ಪೋಷಣೆಗೆ ಬೇಕಾದ ಆರ್ಥಿಕ ಸಹಾಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.
‘ದಿ ಎಲೆಫೆಂಟ್ ವಿಸ್ಪರರ್ಸ್’ ಸಿನಿಮಾ, ಮನುಷ್ಯ ಮತ್ತು ಪ್ರಾಣಿ ನಡುವಿನ ಬಾಂಧವ್ಯ ಹಾಗು ಸಹಬಾಳ್ವೆಗೆ ಪ್ರತೀಕವಾಗಿದೆ.










