ಬಳ್ಳಾರಿ : ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕುಡುತಿನಿ ಪಟ್ಟಣದ ಸಿದ್ದಮ್ಮನಹಳ್ಳಿಯಲ್ಲಿ ನಡೆದಿದೆ. ಅಕ್ಟೋಬರ್ 31 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಗಳು ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ಮನೆಯವರಿಗೆ ಗೊತ್ತಾಗುತ್ತಿದ್ದಂತೆಯೇ ಯುವಕನಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಮನೆಯವರ ಮಾತಿಗೆ ಬೆಲೆ ಕೊಡದೆ, ಯುವಕನೊಂದಿಗೆ ಪ್ರೀತಿ ಒಡನಾಟ ಮುಂದುವರಿಸುತ್ತಿದ್ದಳು ಎಂದು ಶಂಕಿಸಿ ಕೊಲೆ ಮಾಡಿದ್ದಾನೆ.
ಅ.31 ರಂದು ಮಧ್ಯಾಹ್ನ ಓಂಕಾರಗೌಡ ಮಗಳಿಗೆ ಸಿನಿಮಾ ತೋರಿಸುವುದಾಗಿ ಪುಸಲಾಯಿಸಿ ಬೈಕ್ ನಲ್ಲಿ ಮನೆಯಿಂದ ಕರೆದುಕೊಂಡು ಹೋಗಿದ್ದ. ಚಿತ್ರಮಂದಿರದ ಬಳಿ ಹೋದಾಗ ಸಿನಿಮಾ ಆರಂಭವಾಗಿತ್ತು. ಅಲ್ಲಿಂದ ಹೊಟೇಲ್ ಗೆ ಕರೆದೊಯ್ದು ತಿಂಡಿ ತಿನ್ನಿಸಿ, ಬಳಿಕ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿದ್ದಾನೆ.
ನಂತರ ಆಭರಣದ ಅಂಗಡಿಯಲ್ಲಿ ಒಂದು ಜೊತೆ ಓಲೆ, ಉಂಗುರವನ್ನೂ ಮಗಳಿಗೆ ಕೊಡಿಸಿದ್ದಾನೆ. ಊರಿಗೆ ಹಿಂದಿರುಗುವ ಹೊತ್ತಿಗೆ ರಾತ್ರಿಯಾಗಿದೆ. ಈ ವೇಳೆ ಎಚ್ ಎಲ್ ಸಿ ಕಾಲುವೆ ಬಳಿಗೆ ಮಗಳ ಕರೆತಂದು, ನೀರಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ತನ್ನ ಮಗಳನ್ನು ಕೊಲೆ ಮಾಡಿರುವುದಾಗಿ ತಂದೆ ಓಂಕಾರಗೌಡ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.










