ಇಸ್ಲಾಮಾಬಾದ್: ಹಲವು ಔಷಧೀಯ ಗುಣಗಳನ್ನು ಹೊಂದಿರುವ ಅಪರೂಪದ ಮೀನನ್ನು ಮಾರಾಟ ಮಾಡಿ ಪಾಕಿಸ್ತಾನದ ಮೀನುಗಾರನೊಬ್ಬ ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾರೆ.
ಬಡ ಇಬ್ರಾಹಿಂ ಹೈದರಿ ಮೀನುಗಾರಿಕಾ ಗ್ರಾಮದಲ್ಲಿ ವಾಸಿಸುವ ಹಾಜಿ ಬಲೋಚ್ ಮತ್ತು ಆತನ ಸಂಗಡಿಗರು ಅರಬ್ಬಿ ಸಮುದ್ರದಿಂದ ಗೋಲ್ಡನ್ ಫಿಶ್ ಅಥವಾ “ಸೋವಾ” ಎಂದು ಕರೆಯಲ್ಪಡುವ ಮೀನೊಂದನ್ನು ಹಿಡಿದಿದ್ದರು. ಮೀನು ಮಾರಿ ಬಂದ ಹಣವನ್ನು 7 ಮಂದಿ ಮೀನುಗಾರರು ಹಂಚಿಕೊಂಡಿದ್ದಾರೆ.
ಹೀಗೆ ಸಿಕ್ಕಿದ ಮೀನು ಕರಾಚಿ ಬಂದರಿನಲ್ಲಿ ಸುಮಾರು 70 ಲಕ್ಷ ರೂಪಾಯಿಗಳಿಗೆ ಸೇಲ್ ಆಗಿದೆ ಎಂದು ಪಾಕಿಸ್ತಾನದ ಮೀನುಗಾರರ ಸಂಘದ ಮುಬಾರಕ್ ಖಾನ್ ಎಂಬುವವರು ಹೇಳಿದ್ದಾರೆ. ಸೋವಾ ಮೀನನ್ನು ಅತ್ಯಂತ ಹೆಚ್ಚು ಬೆಲೆಬಾಳುವ ಮತ್ತು ಅಪರೂಪದ ಮೀನೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದರ ಹೊಟ್ಟೆಯಲ್ಲಿರುವ ಪದಾರ್ಥಗಳು ಹಲವು ರೋಗಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಮೀನಿನಲ್ಲಿರುವ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ.
ಈ ಮೀನು ಹರಾಜಿನಲ್ಲಿ ಸುಮಾರು 70 ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ. ಸಾಮಾನ್ಯವಾಗಿ 20 ರಿಂದ 40 ಕೆಜಿ ತೂಕದ ಮತ್ತು 1.5 ಮೀಟರ್ ವರೆಗೆ ಬೆಳೆಯುವ ಈ ಮೀನಿಗೆ ಪೂರ್ವ ಏಷ್ಯಾದ ದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಈ ಸೋವಾ ಮೀನುಗಳು ಸಾಂಸ್ಕೃತಿಕವಾಗಿ ಹಾಗೂ ಸಾಂಪ್ರದಾಯಿಕವಾಗಿ ಮಹತ್ವವನ್ನು ಹೊಂದಿದ್ದು, ಸಾಂಪ್ರದಾಯಿಕ ಔಷಧಗಳು ಮತ್ತು ಸ್ಥಳೀಯ ಪಾಕಪದ್ಧತಿಯಲ್ಲಿಯೂ ಅದನ್ನು ಬಳಸಲಾಗುತ್ತದೆ.










