ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು ಅಪಾರ್ಟ್ಮೆಂಟ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬ್ಯಾಟರಾಯನಪುರದಲ್ಲಿ ನಡೆದಿದೆ.
ವಿಜಯಲಕ್ಷ್ಮಿ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೃತ ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ಓದುತಿದ್ದು, ತಂದೆ-ತಾಯಿಗೆ ವಿಚ್ಛೇದನವಾದ ಬಳಿಕ, ತನ್ನ ತಾಯಿ ಯಶೋಧ ಎಂಬುವವರ ಜೊತೆ ಜ್ಞಾನಭಾರತಿಯ ಜ್ಞಾನಜ್ಯೋತಿನಗರದಲ್ಲಿ ವಾಸವಿದ್ದಳು. ಕಳೆದ ಒಂದು ವಾರದಿಂದ ಖಿನ್ನತೆಗೊಳಗಾಗಿದ್ದ ವಿಜಯಲಕ್ಷ್ಮಿ, ಸೆ.19ರಂದು ಕಾಲೇಜಿಗೆ ಹೋಗೊದಾಗಿ ಮನೆಯಿಂದ ಹೋಗಿದ್ದಳಂತೆ. ಆದರೆ ನಿನ್ನೆ ಆಕೆ ಸಾವನ್ನಪ್ಪಿದ್ದಾಳೆ.
ಇನ್ನು ಅಲ್ಲಿಯವರೆಗೂ ಆಕೆ ಎಲ್ಲಿಗೆ ಹೋಗಿದ್ದಳು ಎಂಬ ಮಾಹಿತಿ ತಾಯಿಗೆ ಇರಲಿಲ್ಲ. ಸ್ನೇಹಿತರ ಜೊತೆ ಹೋಗಿರಬಹುದು ಎಂದು ಭಾವಿಸಿದ್ದ ತಾಯಿ. ಒಂದು ದಿನ ಕಳೆದ ಬಳಿಕ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ಅದರಂತೆ ಜ್ಞಾನಭಾರತಿ ಠಾಣೆಗೆ ತೆರಳಿ ದೂರು ನೀಡಲು ಹೋದಾಗ ಸಾವಿನ ಸುದ್ದಿ ತಿಳಿದಿದೆ.
ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.










