ಅಪ್ಪು ಫೋಟೋ ಮುಂದೆ ಶಾಂಪೇನ್ ಬಾಟಲ್ ಓಪನ್ ಮಾಡಿ ‘ಏಕ್ ಲವ್ ಯಾ’ ಚಿತ್ರತಂಡದಿಂದ ಸಂಭ್ರಮಾಚರಣೆ ; ಎಲ್ಲೆಡೆ ಆಕ್ರೋಶ…

73
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ನಿಧನರಾಗಿ 16 ದಿನಗಳು ಕಳೆಯುತ್ತಿದ್ದು, ಅಪ್ಪು ಅಗಲಿಕೆ ನೋವಿನಿಂದ ಹೊರ ಬಂದಿಲ್ಲ. ಆದರೆ, ಏಕ್ ಲವ್ ಯಾ ಸಿನಿಮಾ ತಂಡ ಅಪ್ಪು ಫೋಟೋ ಮುಂದೇ ಶಾಂಪೇನ್ ಬಾಟಲ್ ಓಪನ್ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿ ದೊಡ್ಡ ಎಡವಟ್ಟು ಮಾಡಿಕೊಂಡಿದೆ.

ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ರಕ್ಷಿತಾ ಪ್ರೇಮ್ ನಿರ್ಮಾಣದ ‘ಏಕ್ ಲವ್ ಯಾ’ ಸಿನಿಮಾದಲ್ಲಿ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಿನ್ನೆ ಸಂಜೆ ಈ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಪುನೀತ್ ರಾಜ್‍ಕುಮಾರ್ ಫೋಟೋಗೆ ಚಿತ್ರತಂಡದವರು ನಮನ ಸಲ್ಲಿಸಿ ಬಳಿಕ ಶಾಂಪೇನ್ ಓಪನ್ ಮಾಡಿ ಸಂಭ್ರಮಿಸಿರುವುದು ಈಗ ವಿವಾದಕ್ಕೆ ಕಾರಣ ಆಗಿದೆ. ಅಪ್ಪು ಜೀವನದಲ್ಲಿ ಅಳವಡಿಸಿಕೊಂಡ ನೀತಿಗೆ ಚಿತ್ರತಂಡ ಧಕ್ಕೆವುಂಟುಮಾಡಿದೆ. ಇದರಿಂದ ಅಪ್ಪುಗೆ ಅವಮಾನ ಮಾಡಿದಂತಾಗಿದೆ. ಈ ಕುರಿತಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಪ್ರತಿಕ್ರಿಯೆ ನೀಡಿದ್ದು, ಪುನೀತ್ ಇಂದು ನಮ್ಮಿಂದ ದೂರವಾಗಿರಬಹುದು. ಆದರೆ ಅವರಿಗೆ ಅವಮಾನ ಆಗುವಂತಹ ಕೆಲಸವನ್ನು ಮಾಡಬೇಡಿ. ಪುನೀತ್ ಗೆ ಅವಮಾನ ಆಗುವಂತೆ ನಮ್ಮ ಚಿತ್ರರಂಗದವರು ನಡೆದುಕೊಂಡಿರುವುದರಿಂದ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ. ಅಪ್ಪುಗೆ ಅವಮಾನ ಆಗುವಂತೆ ನಡೆದುಕೊಂಡಿರುವ ಚಿತ್ರತಂಡದವರು ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.