ಅಮಾನತುಗೊಂಡ ಬಿಜೆಪಿ ಮುಖಂಡನ ಅಕ್ರಮ ಹೋಟೆಲ್ ನೆಲಸಮ…

54
firstsuddi

ಭೋಪಾಲ್ : ಮಧ್ಯಪ್ರದೇಶದ ಜಗದೀಶ್ ಯಾದವ್ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಮಿಶ್ರಿ ಚಂದ್ ಗುಪ್ತಾ ಅವರ ಅಕ್ರಮ ಹೋಟೆಲ್ ಅನ್ನು ಜಿಲ್ಲಾಡಳಿತ ನೆಲಸಮಗೊಳಿಸಿದೆ.

ಇಂದೋರ್ ನ ವಿಶೇಷ ತಂಡ ನಿನ್ನೆ ರಾತ್ರಿ ಸುಮಾರು 60 ಡೈನಮೈಟ್ ಗಳನ್ನು ಸ್ಫೋಟಿಸಿ ಸಾಗರದಲ್ಲಿರುವ ಗುಪ್ತಾ ಅವರ ಅಕ್ರಮ ಹೋಟೆಲ್ ಅನ್ನು ನೆಲಸಮಗೊಳಿಸಿದೆ.

ಘಟನೆ ಏನು?: ಡಿಸೆಂಬರ್ 22 ರಂದು ಕೋರೆಗಾಂವ್ ನಿವಾಸಿ ಜಗದೀಶ್ ಯಾದವ್ ಅವರ ಮೇಲೆ ಎಸ್ ಯುವಿ ಹರಿದು ಮೃತಪಟ್ಟಿದ್ದರು. ಯಾದವ್ ಹತ್ಯೆ ನಡೆಸಿರುವ ಆರೋಪ ಬಿಜೆಪಿ ಮುಖಂಡ ಹಾಗೂ ಅವರ ಕುಟುಂಬದ ಸದಸ್ಯರ ಮೇಲಿತ್ತು.

ಇದರಿಂದ ಸಾರ್ವಜನಿಕರು ಗುಪ್ತಾ ವಿರುದ್ಧ ಆಕ್ರೋಶ ಹೊರಹಾಕಿದ್ದು, ಈ ನಡುವೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ 8 ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಐವರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಚಂದ್ ಗುಪ್ತಾ ತಲೆಮರೆಸಿಕೊಂಡಿದ್ದಾರೆ.

ಜಗದೀಶ್ ಯಾದವ್ ಸ್ವತಂತ್ರ ಕೌನ್ಸಿಲರ್ ಕಿರಣ್ ಯಾದವ್ ಅವರ ಸೋದರಳಿಯ ಆಗಿದ್ದಾರೆ. ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಕಿರಣ್ ಯಾದವ್ ಅವರು ಮಿಶ್ರಿ ಚಂದ್ ಗುಪ್ತಾ ಅವರ ಪತ್ನಿ ಮೀನಾ ಅವರನ್ನು 83 ಮತಗಳಿಂದ ಸೋಲಿಸಿದ್ದರು. ಈ ವೈಷಮ್ಯದಲ್ಲಿ ಜಗದೀಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.