ವಾಷಿಂಗ್ಟನ್ : ಅಮೆರಿಕದಲ್ಲಿ ಮಂಕಿಪಾಕ್ಸ್ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಅಲ್ಲಿನ ಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಅಮೆರಿಕದಲ್ಲಿ ಮಂಕಿಪಾಕ್ಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮಂಕಿಪಾಕ್ಸ್ ಕಾಯಿಲೆಯ ಹರಡುವಿಕೆಯನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ್ದಾರೆ. ಈ ಘೋಷಣೆಯು ವೈರಸ್ ಹರಡುವುದನ್ನು ತಡೆಯಲು ಹೆಚ್ಚುವರಿ ಸರ್ಕಾರಿ ಸಂಪನ್ಮೂಲಗಳನ್ನು ಮುಕ್ತಗೊಳಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗದ ಮುಖ್ಯಸ್ಥ ಕ್ಸೇವಿಯರ್ ಬೆಸೆರಾ ಮಾತನಾಡಿ, ಮಂಕಿಪಾಕ್ಸ್ ಎದುರಿಸಲು ಮುಂದಿನ ಹಂತಕ್ಕೆ ಸ್ಪಂದಿಸಲು ದೇಶವು ಸಿದ್ಧವಾಗಿದೆ ಮತ್ತು ಸೋಂಕನ್ನು ಗಂಭೀರವಾಗಿ ಪರಿಗಣಿಸುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ. ಅಮೆರಿಕದಲ್ಲಿ ಈವರೆಗೆ 6,600 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ.
ಇತ್ತ ಭಾರತದಲ್ಲಿ ಈವರೆಗೆ ಮಂಕಿ ಪಾಕ್ಸ್ ನ 9 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ. ಸೋಂಕು ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಿಸುವ ಭೀತಿ ಇದೆ ಅಂತ ತಜ್ಞರು ಎಚ್ಚರಿಸಿದ್ದಾರೆ.










