ಲಕ್ನೋ: ಅಯೋಧ್ಯೆ ರಾಮಮಂದಿರದ ಮೊದಲ ವಾರ್ಷಿಕೋತ್ಸವ ಸಂಭ್ರಮ ಮನೆ ಮಾಡಿದೆ. ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ ಒಂದು ವರ್ಷ ತುಂಬಿದ ಹಿನ್ನೆಲೆ ಅಯೋಧ್ಯೆಯಲ್ಲಿ ಮೂರು ದಿನಗಳ ಕಾಲ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿದೆ. 3 ದಿನಗಳ ಕಾಲ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ಮೊದಲ ವಾರ್ಷಿಕೋತ್ಸವದ ಹಿನ್ನೆಲೆ ರಾಮಮಂದಿರ ಅಲಂಕಾರಕ್ಕೆ ಐವತ್ತು ಕ್ವಿಂಟಾಲ್ ಹೂಗಳನ್ನ ಬಳಸಲಾಗಿದೆ. ಬಾಲರಾಮನ ದರ್ಶನಕ್ಕೆ ಬರುವ ಎಲ್ಲಾ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ಎಲ್ಲಾ ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇಂದಿನಿಂದ 3 ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆಯಲಿವೆ. ಇದರ ಭಾಗವಾಗಿ ಶುಕ್ಲ ಯಜುರ್ವೇದದಿಂದ ಅಗ್ನಿಹೋತ್ರ ಮಂತ್ರಪಠಣ ಮಾಡಲಾಗುತ್ತದೆ. ಬೆಳಗ್ಗೆ 8 ರಿಂದ 11 ಹಾಗೂ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ಮಂತ್ರ ಪಠಣ ಮಾಡಲಾಗುತ್ತದೆ. ಇದರೊಂದಿಗೆ ಲಕ್ಷ ರಾಮ ರಕ್ಷಾ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಹಾಗೂ ಆರು ಲಕ್ಷ ಶ್ರೀ ರಾಮ ಮಂತ್ರದ ಪಠಣ ಮಾಡಲಾಗುತ್ತದೆ. ಮಂದಿರದ ನೆಲಮಾಳಿಗೆಯಲ್ಲಿ ಪ್ರತಿದಿನ ಮಧ್ಯಾಹ್ನ ಮೂರು ಗಂಟೆಯಿಂದ ಐದು ಗಂಟೆವರೆಗೆ ರಾಗ ಸೇವೆ, ಸಂಜೆ ಆರು ಗಂಟೆಗೆ ಅಭಿನಂದನಾ ಗೀತ ಸೇವೆ ಶ್ರೀರಾಮನಿಗೆ ಅರ್ಪಣೆಯಾಗಲಿದೆ. ಮೊದಲ ಮಹಡಿಯಲ್ಲಿ ಸಂಗೀತ ಮಾನಸ ಪಠಣ ನಡೆಯಲಿವೆ.










