ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ 12ನೇ ದಿನವಾಗಿದ್ದು, ಈ ಹಿನ್ನಲೆ ಇಂದು ಪುನೀತ್ ಅಭಿಮಾನಿಗಳು, ಗಣ್ಯರಿಗೆ ಅನ್ನಸಂತರ್ಪಣೆ ನಡೆಯಲಿದೆ. ನಗರದ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆಗೆ ಸಕಲ ಸಿದ್ಧತೆ ನಡೆದಿದೆ.
ಸುಮಾರು 25-30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 11.30ರ ನಂತರ ಅನ್ನ ಸಂತರ್ಪಣೆ ಪ್ರಾರಂಭವಾಗಲಿದೆ. ಅಪ್ಪು ಅಭಿಮಾನಿಗಳಿಗೆ ವೆಜ್-ನಾನ್ವೆಜ್ ವ್ಯವಸ್ಥೆ ಕೂಡ ಇದ್ದು, ಸುಮಾರು 5 ಸಾವಿರ ಜನರಿಗೆ ವೆಜ್, ಉಳಿದವರಿಗೆ ನಾನ್ ವೆಜ್ ರೆಡಿ ಮಾಡಲಾಗಿದೆ.
ಸಸ್ಯಾಹಾರಿಗಳಿಗೆ ಘೀ ರೈಸ್, ವೆಜ್ ಕುರ್ಮಾ, ಅಕ್ಕಿ ಪಾಯಸ, ಆಲೂ ಕಬಾಬ್, ಗೋಬಿ ಮಂಚೂರಿ, ಮಸಾಲಾ ವಡೆ, ಅನ್ನ, ಸಾಂಬಾರ್, ರಸಂ, ಹಪ್ಪಳದ ಊಟ ಸಿದ್ಧಪಡಿಸಲಾಗಿದೆ. ಹಾಗೆಯೇ ಮಾಂಸಾಹಾರಿಗಳಿಗಾಗಿ ಚಿಕನ್ ಚಾಪ್ಸ್, ಕಬಾಬ್, ಮೊಟ್ಟೆ, ಘೀ ರೈಸ್, ಅನ್ನ, ರಸಂ, ಅಕ್ಕಿ ಪಾಯಸ ಸಿದ್ಧಪಡಿಸಲಾಗಿದೆ. ಸಿಬ್ಬಂದಿಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅರಮನೆ ಮೈದಾನದ ಸುತ್ತ ಪೊಲೀಸರ ಬಿಗಿ ಬಂದೋಬಸ್ತ್ ವಹಿಸಲಾಗಿದ್ದು, ಭದ್ರತೆಗೆ 1000 ಪೊಲೀಸರನ್ನು ನಿಯೋಜಿಸಲಾಗಿದೆ.










