ಭೋಪಾಲ್ ನ ಕಮಲಾ ನೆಹರು ಆಸ್ಪತ್ರೆಯಲ್ಲಿ ಅಗ್ನಿ ದುರಂತ – ನಾಲ್ಕು ಮಕ್ಕಳು ಸಾವು…

62
firstsuddi

ಮಧ್ಯಪ್ರದೇಶ : ಭೋಪಾಲ್ ನ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ ನಾಲ್ಕು ಮಕ್ಕಳು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. 3ನೇ ಮಹಡಿಯಲ್ಲಿರುವ ಮಕ್ಕಳ ಐಸಿಯು ವಾರ್ಡ್ ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ಸಂಭವಿಸಿರಬಹುದು. ವಾರ್ಡ್ ನಲ್ಲಿ 40 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯಲ್ಲಿ 36 ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇದೀಗ 36 ಮಕ್ಕಳನ್ನು ಬೇರೆ ವಾರ್ಡ್ ಗೆ  ಸ್ಥಳಾಂತರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಮಾಹಿತಿ ನೀಡಿದ್ದಾರೆ.

ಈ ಘಟನೆ ಕುರಿತಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್ ನ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ದುಃಖಕರ ಸಂಗತಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ದುರಂತದಲ್ಲಿ ಮೃತಪಟ್ಟಿರುವ ನಾಲ್ಕು ಮಕ್ಕಳ ಪೋಷಕರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ ಎಂದು ಸಾರಂಗ್ ತಿಳಿಸಿದ್ದಾರೆ.