ಚಿಕ್ಕಮಗಳೂರು : ಅರಾಜಕಾತವಾದಿಗಳ ಕುಮ್ಮಕ್ಕಿಗೆ ನಾವ್ಯಾರು ಬಲಿ ಆಗಬಾರದು, ಬಲಿಯಾಗದೆ ನಾವು ಸೌಹಾರ್ದತೆ, ಶಾಂತಿಯನ್ನ ಕಾಪಾಡಿಕೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಮನವಿ ಮಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಅರಾಜಕತೆ, ಸಂಘರ್ಷ ನಡೆಸುವ ಸಂಚು ರೂಪಿಸಿದ್ದಾರೆ ಎಂದು ನನಗೆ ಅನಿಸುತ್ತಿದೆ. ಕೊಲ್ಲಾಪುರದಲ್ಲಿ ಕನ್ನಡ ಬಾವುಟವನ್ನ ಸುಟ್ಟರು. ಕೊಲ್ಲಾಪುರದ ಮಹಾರಾಷ್ಟ್ರದಲ್ಲಿ ಯಾವ ಪಾರ್ಟಿಯ ಸರ್ಕಾರ ಇದೆ. ಕಾಂಗ್ರೆಸ್ ಸರ್ಕಾರದ ಪಾಲುದಾರರು. ಇಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿಯುವ ಕೆಲಸ ಮಾಡಿದರು. ಇವರ ಉದ್ದೇಶ ಕರ್ನಾಟಕ-ಮಹಾರಾಷ್ಟ್ರ ಸಂಘರ್ಷ ಆಗಲಿ ಅನ್ನೋದಾಗಿ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ಇದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಲಕ್ಷಾಂತರ ಜನ ಮರಾಠಿಗರು ಇದ್ದಾರೆ. ನಮ್ಮೆಲ್ಲರ ಭಾವನೆ ರಾಷ್ಟ್ರೀಯತೆಯ ಹಾಸುಹೊಕ್ಕಾಗಿದೆ. ಅದಕ್ಕೆ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವುದಕ್ಕೆ ಕೆಲವರು ಷಡ್ಯಂತ್ರವನ್ನು ನಡೆಸುತ್ತಾರೆ. ಆ ಷಡ್ಯಂತ್ರಕ್ಕೆ ಅವಕಾಶವನ್ನು ನೀಡಬಾರದು ಎಂದು ಎರಡು ರಾಜ್ಯದ ಸಮುದಾಯದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.










