ಆಜಾದ್ ಪಾರ್ಕ್ ವೃತ್ತದಿಂದ ಹಿರೇಮಗಳೂರುವರೆಗಿನ ರಸ್ತೆಗೆ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರನ್ನು ನಾಮಕರಣ ಮಾಡಲಾಗುವುದು: ಎಚ್.ಡಿ. ತಮ್ಮಯ್ಯ.

102
firstsuddi

ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ವೃತ್ತದಿಂದ ಹಿರೇಮಗಳೂರುವರೆಗಿನ ಬೇಲೂರು ರಸ್ತೆಗೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನಗರದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಇಂದು ಏರ್ಪಡಿಸಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂಜಿನಿಯರ್ಸ್ ಸಂಘ ಈ ಹಿಂದೆ ನೀಡಿದ್ದ ಮನವಿಯನ್ನು ಪುರಸ್ಕರಿಸಿ ಈಗಾಗಲೇ ನಗರಸಭೆಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರನ್ನು ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೆಲವು ತಾಂತ್ರಿಕ ಕಾರಣಗಳಿಂದಾಗಿ ನಾಮಕರಣಕ್ಕೆ ಹಿನ್ನಡೆಯಾಗಿದ್ದು, ಆದಷ್ಟು ಶೀಘ್ರ ಅವುಗಳನ್ನು ಪರಿಹರಿಸಿ, ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಯಾವುದೇ ವ್ಯಕ್ತಿ ಸಮಾಜಕ್ಕಾಗಿ ಬದುಕಿದರೆ ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ. ಅವರ, ಹೆಸರು ಚಿರಸ್ಥಾಯಿಯಾಗುತ್ತದೆ. ಎಂಬುದಕ್ಕೆ ಸರ್.ಎಂ.ವಿಶ್ವೇಶ್ವರಯ್ಯನವರು ಸಾಕ್ಷಿ ಎಂದ ಶಾಸಕರು, ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಅವರಲ್ಲಿದ್ದ ತಾಂತ್ರಿಕತೆಯನ್ನು ಇಂದಿನ ಇಂಜಿನಯರ್‌ಗಳು ಮೈಗೂಡಿಸಿಕೊಳ್ಳಬೇಕು. ವೃತ್ತಿಯನ್ನು ಪ್ರೀತಿಸಬೇಕು, ಶ್ರದ್ದೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಎಐಟಿ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ ಮಾತನಾಡಿ, ವಿಶ್ವೇಶ್ವರಯ್ಯನವರ ಸಮಯ ಪಾಲನೆ ಮತ್ತು ಕರ್ತವ್ಯ ನಿಷ್ಠೆಯನ್ನು ಇಂದಿನ ಪೀಳಿಗೆ ಸ್ವಲ್ಪವಾದರೂ ಪಾಲಿಸಬೇಕು. ಅದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ, ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಅಧ್ಯಕ್ಷ ಬಿ.ಎಂ.ಪ್ರಕಾಶ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಜನ್ಮದಿನದ ಪ್ರಯುಕ್ತ ಲೋಕೋಪಯೋಗಿ ಇಲಾಖೆ ಆವರಣದಲ್ಲಿರುವ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಪುತ್ಥಳಿಗೆ ಸಂಘದಿಂದ ವಿಶೇಷ ಪೂಜೆ, ಗಣ್ಯರಿಂದ ಮಾಲಾರ್ಪಣೆ, ಸಾಮೂಹಿಕ ಪುಷ್ಪ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮಕ್ಕೆ ಮುನ್ನ ನೂರಾರು ಇಂಜಿನಯರ್‌ಗಳು ಸಂಘದ ನೇತೃತ್ವದಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರದೊಂದಿಗೆ ಪಾಲಿಟೆಕ್ನಿಕ್ ಆವರಣದಿಂದ ಆಜಾದ್‍ಪಾರ್ಕ್ ವೃತ್ತದವರೆಗೆ ಮೆರವಣಿಗೆ ನಡೆಸಿದರು.

ಕಾರ್ಯಕ್ರಮದ ನಂತರ ನಗರದ ಅನ್ನಪೂರ್ಣ ವೃದ್ದಾಶ್ರಮದ ನಿವಾಸಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಹಿರಿಯ ನಾಗರಿಕರಿಗೆ ಖುರ್ಚಿ, ವಾಕಿಂಗ್ ಸ್ಟಿಕ್, ಅಡುಗೆ ಒಲೆಯನ್ನು ಸಂಘದಿಂದ ವಿತರಿಸಲಾಯಿತು.

ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಬಿ.ಎಚ್.ಮಲ್ಲಿಕಾರ್ಜುನ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಡಿ.ಎನ್.ಶ್ರೀಧರ್, ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಷಿಯೇಷನ್‍ನ ಕಾರ್ಯದರ್ಶಿ ಬಿ.ಎಂ.ಧನುಷ್, ಖಜಾಂಚಿ ಇರ್ಷಾದ್, ನಿಕಟಪೂರ್ವ ಅಧ್ಯಕ್ಷ ಸಿ.ಪಿ.ಸುರೇಶ್ ಉಪಸ್ಥಿತರಿದ್ದರು.