ಆಟೋದಲ್ಲೇ ಚಿನ್ನಾಭರಣದ ಬ್ಯಾಗ್ ಬಿಟ್ಟು ಹೋದ ಮಹಿಳೆ- 24 ಗಂಟೆಗಳಲ್ಲಿ ಪತ್ತೆ ಹಚ್ಚಿದ ಅಶೋಕ ನಗರ ಪೊಲೀಸರು…

46
firstsuddi

ಕಲಬುರಗಿ: ಮಹಿಳೆಯೊಬ್ಬರು ಆಟೊದಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣ ಇದ್ದ ಬ್ಯಾಗ್ ಅನ್ನು ಜಿಲ್ಲೆಯ ಅಶೋಕ ನಗರ ಠಾಣೆಯ ಪೊಲೀಸರು ಕೇವಲ 24 ಗಂಟೆಗಳಲ್ಲಿ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಎಸ್‌ಬಿಐ ಕಾಲೊನಿ ನಿವಾಸಿ ರೇಖಾ ಲಕ್ಷ್ಮಿಸಾಗರ ಅವರು 13.42 ಲಕ್ಷ ಮೌಲ್ಯದ ಚಿನ್ನಾಭರಣ ಇರಿಸಿದ್ದ ಬ್ಯಾಗ್ ಆಟೊದಲ್ಲಿ ಮರೆತು ಬಿಟ್ಟು ಹೋಗಿದ್ದರು. ಬಿಟ್ಟು ಹೋದ ಬ್ಯಾಗ್ ಪತ್ತೆ ಹಚ್ಚಿ, ಪೊಲೀಸ್ ಕಮಿಷನರ್ ಚೇತನ್ ಆರ್ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.

ರೇಖಾ ಅವರು ಫೆ.17ರ ಸಂಜೆ ತಮ್ಮ ತಂಗಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಬೀದರ್‌ನ ಬಸವಕಲ್ಯಾಣಕ್ಕೆ ತೆರಳುತ್ತಿದ್ದರು. ತಂಗಿಗೆ ಒಡವೆ ತೊಡಿಸಲು ತಮ್ಮ ಮನೆಯಿಂದ 13.42 ಲಕ್ಷ ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದರು. ಸಂತೋಷ ಕಾಲೊನಿ ಆಟೋ ನಿಲ್ದಾಣದಿಂದ ಹೊರಟು ಕೇಂದ್ರ ಬಸ್ ನಿಲ್ದಾಣ ಬಳಿಯ ಬೇಕರಿಯೊಂದರ ಸಮೀಪ ಇಳಿದರು. ಒಡವೆಗಳು ಇದ್ದ ಬ್ಯಾಗ್ ಅನ್ನು ಆಟೋದಲ್ಲಿ ಮರೆತು ಬಿಟ್ಟು ಹೋದರು. ನಿಲ್ದಾಣದ ಒಳಗೆ ಹೋದಾಗ ನೆನಪಾಗಿ, ವಾಪಸ್ ಬಂದು ನೋಡುವಷ್ಟರಲ್ಲಿ ಆಟೋ ಅಲ್ಲಿಂದ ತೆರಳಿತ್ತು. ಗಾಬರಿಯಾದ ಮಹಿಳೆ ತಕ್ಷಣ ಅಶೋಕ ನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶದಲ್ಲಿ ಪ್ರಕರಣ ಬೆನ್ನಟ್ಟಿದ ಠಾಣೆಯ ಪೊಲೀಸರು, ಸಂತೋಷ ನಗರ, ಯಾತ್ರಿಕ ನಿವಾಸ್, ಜನತಾ ಬೇಕರಿ ಹತ್ತಿರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ.

ಆದರೆ ಆಟೋ ನಂಬರ್ ಪ್ಲೇಟ್ ಮಾತ್ರ ಕಂಡಿರಲಿಲ್ಲ. ಆಟೋ ಹಿಂಭಾಗದಲ್ಲಿ ಇದ್ದ ಜಾಹೀರಾತು ಕಾಣಿಸಿತ್ತು. ಇದರ ಜಾಡು ಹಿಡಿದು ಹೋದ ಪೊಲೀಸರು, ಜಾಹೀರಾತು ನೀಡಿದವರನ್ನು ಸಂಪರ್ಕಿಸಿ ಜಾಹೀರಾತು ಅಂಟಿಸಿದ 200 ಆಟೋಗಳ ಸಂಖ್ಯೆ ಮತ್ತು ಅವರ ಭಾವಚಿತ್ರ ತರಿಸಿಕೊಂಡು ಪರಿಶೀಲಿಸಿದ್ದಾರೆ. ಕೊನೆಗೆ ಆಟೋ ನಂಬರ್ ಪತ್ತೆ ಹಚ್ಚಿ ಬಿದ್ದಾಪೂರ ಕಾಲೋನಿಯಲ್ಲಿರಯವ ಆಟೋ ಚಾಲಕನ ಮನೆಗೆ ತೆರಳಿ ಚಿನ್ನಾಭರಣ ಸಮೇತ ಬ್ಯಾಗ್ ವಶಕ್ಕೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.

ನಂತರ ಬ್ಯಾಗ್ ವಾರಸುದಾರರು ಪರಿಶೀಲಿಸಿದಾಗ ಎಲ್ಲ ಒಡವೆಗಳು ಇರುವುದಾಗಿ ಖಚಿತಪಡಿಸಿದರು. ಆ ಬಳಿಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ವಾರಸುದಾರರಿಗೆ ಚಿನ್ನಾಭರಣಗಳು ಇದ್ದ ಬ್ಯಾಗ್ ನೀಡಲಾಯಿತು.

24 ಗಂಟೆಯೊಳಗೆ ಬಿಟ್ಟು ಹೋದ ಬ್ಯಾಗ್ ಪತ್ತೆ ಹಚ್ಚಿ, ವಾರಸುದಾರರಿಗೆ ನೀಡಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.