ನವದೆಹಲಿ: ಆದಿತ್ಯ ಎಲ್-1 ಉಡಾವಣೆಯಾದ ದಿನವೇ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.
ಭಾರತದ ಸೂರ್ಯ ಮಿಷನ್ ಆದಿತ್ಯ ಎಲ್1 ಉಡಾವಣೆ ಸಮಯದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಎಸ್ ಸೋಮನಾಥ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಚಂದ್ರಯಾನ-3 ಮಿಷನ್ ಉಡಾವಣೆ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳಿದ್ದವು. ಆದರೆ ಆ ಸಮಯದಲ್ಲಿ ನನಗೆ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಆದಿತ್ಯ-ಎಲ್1 ಮಿಷನ್ ಉಡಾವಣೆಯಾದ ದಿನ ಸ್ಕ್ಯಾನಿಂಗ್ ಮಾಡಿದಾಗ ಕ್ಯಾನ್ಸರ್ ಇರುವುದು ದೃಢಪಟ್ಟಿತು ಎಂದು ತಿಳಿಸಿದರು.
ಕ್ಯಾನ್ಸರ್ ಇರುವುದು ದೃಢಪಡುತ್ತಿದ್ದಂತೆ ನನಗೆ ಮಾತ್ರವಲ್ಲ ಈ ಸವಾಲಿನ ಅವಧಿಯಲ್ಲಿ ನನ್ನ ಕುಟುಂಬ ಮತ್ತು ಸಹೋದ್ಯೋಗಿಗಳಿಗೂ ಆಘಾತವಾಯಿತು ಎಂದು ಹೇಳಿದರು.
ಆದಿತ್ಯ ಎಲ್ 1, ಸೂರ್ಯನನ್ನು ಅಧ್ಯಯನ ಮಾಡಲು ತನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ ಬಳಿಕ ಸೋಮನಾಥ್ ರೂಟಿನ್ ಸ್ಕ್ಯಾನ್ಗೆ ಒಳಗಾದರು. ಈ ವೇಳೆ ಕ್ಯಾನ್ಸರ್ ಇರುವುದು ದೃಢಪಡುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗೆ ಚೆನ್ನೈಯ ಆಸ್ಪತ್ರೆಗೆ ದಾಖಲಾದರು. ಈ ಕ್ಯಾನ್ಸರ್ ಅನುವಂಶೀಯತೆಯಿಂದ ಬಂದಿರುವುದು ಗೊತ್ತಾಯಿತು. ಸೋಮನಾಥ್ ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಕಿಮೊಥೆರಪಿ ಮಾಡಲಾಯಿತು.
ಆಸ್ಪತ್ರೆಯಲ್ಲಿ ಕೇವಲ ನಾಲ್ಕು ದಿನಗಳನ್ನು ಕಳೆದ ನಂತರ ಸೋಮನಾಥ್ ಮತ್ತೆ ಇಸ್ರೋದಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾದರು. ಐದನೇ ದಿನದಿಂದ ಯಾವುದೇ ನೋವು ಇಲ್ಲದೆ ಕೆಲಸ ಮಾಡಲಾರಂಭಿಸಿದರು.
ನಾನು ನಿಯಮಿತವಾಗಿ ತಪಾಸಣೆ ಮತ್ತು ಸ್ಕ್ಯಾನ್ಗೆ ಒಳಗಾಗುತ್ತೇನೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಮತ್ತು ನನ್ನ ಕರ್ತವ್ಯವನ್ನು ಪುನರಾರಂಭಿಸಿದ್ದೇನೆ ಎಂದು ಸೋಮನಾಥ್ ಹೇಳಿದರು.










