ಭೋಪಾಲ್: ಮದ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಆದಿವಾಸಿ ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದ ಆರೋಪಿ ಪ್ರವೇಶ್ ಶುಕ್ಲಾ ಮನೆಯನ್ನು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ.
ಮಂಗಳವಾರ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವೀಡಿಯೊ ವೈರಲ್ ಆಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಅಧಿಕಾರಿಗಳು ಬುಲ್ಡೋಜರ್ನೊಂದಿಗೆ ಆರೋಪಿಯ ಮನೆಗೆ ಆಗಮಿಸುತ್ತಿದ್ದಂತೆ, ಅವರ ಕುಟುಂಬ ಸದಸ್ಯರು ಆರೋಪಿಯನ್ನು ಬಂಧಿಸಿದ ವೀಡಿಯೊ ಹಳೆಯದು ಎಂದು ಹೇಳಿದರು, ಚುನಾವಣೆ ಹತ್ತಿರವಾಗಿರುವುದರಿಂದ ಅದನ್ನು ಮುನ್ನೆಲೆಗೆ ತರಲಾಗಿದೆ. ರಾಜಕೀಯ ಕಾರಣಗಳಿಗಾಗಿ ಹಳೆಯ ವೀಡಿಯೊ ಪ್ರಸಾರ ಮಾಡುತ್ತಿದ್ದಾರೆ ಎಂದು ಆರೋಪಿ ಸಹೋದರಿ ದೂರಿದ್ದಾರೆ.
ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ರೇವಾ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ. ಆರೋಪಿ ಪ್ರವೇಶ್ ಶುಕ್ಲಾ ತಂದೆ, ನನ್ನ ಮಗ ಈ ಕೃತ್ಯ ಎಸಗಲು ಸಾಧ್ಯವೇ ಇಲ್ಲ, ಇದು ಸಂಚು, ಇದರಿಂದ ನಮಗೆ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.
ಮಧ್ಯ ಪ್ರದೇಶದ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಕುಡಿದ ನಶೆಯಲ್ಲಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಬಳಿಕ ಪ್ರವೇಶ್ ಶುಕ್ಲಾ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.










