ತಿರುವನಂತಪುರಂ : ಕೇರಳದ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ರಾಜೀನಾಮೆ ಕೇಳಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಸಿಎಂ ಪಿಣರಾಯಿ ವಿಜಯನ್ ಕಿಡಿ ಕಾರಿದ್ದು, ರಾಜ್ಯಪಾಲರು ಆರ್ ಎಸ್ ಎಸ್ ಸಾಧನದಂತೆ ವರ್ತಿಸುತ್ತಿದ್ದು, ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರ ಹುದ್ದೆ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವುದೇ ವಿನಃ ಸರ್ಕಾರದ ವಿರುದ್ಧ ನಡೆಯುವುದಲ್ಲ. ರಾಜ್ಯಪಾಲರ ವರ್ತನೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ಕುಲಪತಿಗಳ ಅಧಿಕಾರದ ಮೇಲಿನ ಅತಿಕ್ರಮಣವಾಗಿದೆ. ಕೇರಳದ 9 ವಿಶ್ವವಿದ್ಯಾಲಯಗಳ ಕುಲಪತಿಗಳು ರಾಜೀನಾಮೆ ನೀಡಬೇಕೆಂದು ರಾಜ್ಯಪಾಲರು ನಿರ್ದೇಶನ ನೀಡಿದ ಬೆನ್ನಲ್ಲೇ ಕೇರಳದ ಮುಖ್ಯಮಂತ್ರಿ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗಷ್ಟೇ ಯುಜಿಸಿ ನಿಯಮಗಳನ್ನು ಪಾಲಿಸದೆ ನೇಮಕಗೊಳಿಸಿರುವ ಹಿನ್ನೆಲೆಯಲ್ಲಿ ತಿರುವನಂತಪುರದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ (ಕೆಟಿಯು) ಉಪಕುಲಪತಿಯಾಗಿ ಡಾ.ರಾಜಶ್ರೀ ಎಂಎಸ್ ಅವರ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವ ಕೇರಳದ ರಾಜ್ಯಪಾಲರು ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ 9 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ.
ಒಂಬತ್ತು ವಿಶ್ವವಿದ್ಯಾನಿಲಯಗಳು : ಕೇರಳ ವಿಶ್ವವಿದ್ಯಾನಿಲಯ, ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ, ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ, ಕಣ್ಣೂರು ವಿಶ್ವವಿದ್ಯಾಲಯ, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ, ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ.










