ಚಿತ್ರದುರ್ಗ : ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೇವಾರ್ ಅವರಿಗೆ ಸಂಬಂಧಿಸಿದ ಪಠ್ಯವನ್ನು ಕೈಬಿಡುವುದಿಲ್ಲ. ಅವರ ಪಠ್ಯ ಇದ್ದರೆ ತಪ್ಪೇನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದರು.
ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿದೆ. ಪಠ್ಯ ಪುಸ್ತಕ ಸಮಿತಿ ವಿಸರ್ಜನೆಯಾಗಿದೆ. ಆದರೆ ರದ್ದು ಮಾಡಿಲ್ಲ. ಹೊಸ ಸಮಿತಿ ರಚನೆಯ ಅವಶ್ಯಕತೆ ಇಲ್ಲ ಎಂದರು.
ಪಠ್ಯಪುಸ್ತಕ ವಿಚಾರದಲ್ಲಿ ಚರ್ಚೆ ನಡೆದ ಬಳಿಕ ಪರಿಶೀಲಿಸುವುದಾಗಿ ಆರಂಭದಲ್ಲೇ ಹೇಳಿದ್ದೆ. ವಾಸ್ತವಾಂಶದ ಆಧಾರದ ಮೇರೆಗೆ ಕೆಲ ಬದಲಾವಣೆ ಮಾಡಲಾಗುತ್ತಿದೆ. ಮಠಾಧೀಶರ ಒತ್ತಡಕ್ಕೆ ಮಣಿದು ಈ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದರು.
ಪಠ್ಯಪುಸ್ತಕವನ್ನು ನಾನೂ ಗಮನಿಸಿರಲಿಲ್ಲ. ಶುಕ್ರವಾರ ಪಠ್ಯಪುಸ್ತಕ ಪರಿಶೀಲನೆ ಮಾಡಿದೆ. ಬರಗೂರು ರಾಮಚಂದ್ರಪ್ಪ ಸಮಿತಿ ರಚಿಸಿದ್ದ ಪಠ್ಯಕ್ಕೂ ಪರಿಷ್ಕೃತ ಪಠ್ಯಕ್ಕೂ ಒಂದು ವಾಕ್ಯ ಮಾತ್ರ ವ್ಯತ್ಯಾಸವಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅವರು ಪ್ರಶ್ನಿಸಿದ ಲಿಂಗದೀಕ್ಷೆ ಬರಗೂರು ಸಮೀತಿಯ ಪಠ್ಯದಲ್ಲಿಯೇ ಇತ್ತು. ಇದನ್ನು ಮಠಾಧೀಶರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ನಮ್ಮದು ಬಸವ ಪಥದ ಸರ್ಕಾರ ಎಂದು ಮೊದಲೇ ಹೇಳಿದ್ದೇನೆ. ಬಸವಣ್ಣನವರು ರಚಿಸಿದ ಹಲವಾರು ಅತ್ಯುತ್ತಮ ವಚನಗಳು ಪಠ್ಯದಲ್ಲಿವೆ. ಆದಷ್ಟು ಶೀಘ್ರದಲ್ಲಿ ಮಕ್ಕಳಿಗೆ ಪರಿಷ್ಕೃತ ಪಠ್ಯ ಪುಸ್ತಕ ಒದಗಿಸುತ್ತೇವೆ ಎಂದರು. ಶ್ರೀರಂಗಪಟ್ಟಣದ ಮಂದಿರ ಮತ್ತು ಮಸೀದಿ ವಿವಾದಕ್ಕೆ ಸಂಬಂದಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.










