ಬೆಂಗಳೂರು: ಆಸ್ತಿ ಹಸ್ತಾಂತರ ಮಾಡಲಿಲ್ಲ ಅನ್ನೋ ಕಾರಣಕ್ಕೆ ಅಪ್ಪನ ಕಣ್ಣುಗಳನ್ನು ಕಿತ್ತು ಹಾಕಿದ್ದ ಮಗನಿಗೆ ನಗರದ 57ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ 40 ಸಾವಿರ ದಂಡಸಹಿತ 9 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
44 ವರ್ಷದ ಅಭಿಷೇಕ್ ಚೇತನ್ ಶಿಕ್ಷೆಗೊಳಗಾದ ವ್ಯಕ್ತಿ. ಬನಶಂಕರಿ ಶಾಕಾಂಬರಿ ನಗರದಲ್ಲಿ ಅಪರಾಧಿಯ ತಂದೆ ಪರಮೇಶ್ವರ್(66) ವಾಸವಾಗಿದ್ದರು. ಆಸ್ತಿ ಪತ್ರಕ್ಕೆ ಸಹಿ ಹಾಕಿಲ್ಲ ಎಂಬ ಕಾರಣಕ್ಕೆ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಭಿಷೇಕ್ ಕೊಲೆ ಯತ್ನ ನಡೆಸಿದ್ದ. 2018ರ ಆಗಸ್ಟ್ 29 ರಂದು ಈ ಘಟನೆ ನಡೆದಿತ್ತು. ಜಯನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಜೆ.ಪಿ ನಗರ ಪೊಲೀಸರು ಅಭಿಷೇಕ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಮೇಲೆ ಅಭಿಷೇಕ್ ಜಾಮೀನು ಪಡೆದು ಹೊರಬಂದಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಕೋರ್ಟ್ ಸೂಚನೆ ಮೇರೆಗೆ ಆತನನ್ನು ಮತ್ತೆ ಬಂಧಿಸಲಾಗಿತ್ತು.
ಜಯನಗರ ಪೊಲೀಸರು ಅಭಿಷೇಕ್ನನ್ನು ಬಂಧಿಸಿ ತನಿಕೆ ನಡೆಸಿ 57ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದರು. ಸುದೀರ್ಘ ವಿಚಾರಣೆಯ ಬಳಿಕ ಅಪರಾಧವೆಸಗಿರುವುದು ಸಾಬೀತಾಗಿದ್ದು, ಇದೀಗ ಕೋರ್ಟ್ ದಂಡ ಸಮೇತ 9 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.










