ಮೈಸೂರು : ಆಸ್ತಿ ವಿಚಾರ ಹಿನ್ನಲೆಯಲ್ಲಿ ತಂದೆಯ ಮೇಲೆ ಮಗನೇ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ವಿಜಯನಗರದ ಮೂರನೇ ಹಂತದಲ್ಲಿ ನಡೆದಿದೆ.
ಶಿವಕುಮಾರ್ (50) ಎಂಬುವರು ಹಲ್ಲೆಗೊಳಗಾದವರು. 4 ವರ್ಷಗಳಿಂದ ಪತ್ನಿ, ಮಗನಿಂದ ದೂರವಿದ್ದ ಶಿವಕುಮಾರ್ ನಿನ್ನೆ ಪತ್ನಿಯ ಮನೆಗೆ ಹೋಗಿ ಆಸ್ತಿ ವಿಚಾರವಾಗಿ ಗಲಾಟೆ ಮಾಡಿದ್ದರು. ಈ ವೇಳೆ ಮಗ ರುನಾಲ್ ಮತ್ತು ತಂದೆ ಶಿವಕುಮಾರ್ ನಡುವೆ ಪರಸ್ಪರ ಜಗಳ ಶುರುವಾಗಿ ಇಬ್ಬರೂ ಹೊಡೆದಾಡಿಕೊಂಡಿದ್ದು, ತಂದೆ ಮೇಲೆ ಏರ್ ಗನ್ ನಿಂದ ಮಗ ಗುಂಡು ಹಾರಿಸಿದ್ದಾನೆ.
ಗುಂಡು ಶಿವಕುಮಾರ್ ಅವರ ಭುಜಕ್ಕೆ ತಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.










