ಕೊಟ್ಟಿಗೆಹಾರ : ಅತಿಯಾದ ಇಂಗ್ಲೀಷ್ ವ್ಯಾಮೋಹದಿಂದಾಗಿ ಇಂಗ್ಲೀಷ್ ಅಡುಗೆ ಮನೆಗೂ ವ್ಯಾಪಿಸಿರುವುದು ಕನ್ನಡ ಭಾಷಾ ಬೆಳವಣಿಗೆಗೆ ತೊಡಕಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಆತಂಕ ವ್ಯಕ್ತ ಪಡಿಸಿದರು.
ನಿಡುವಾಳೆಯ ಶ್ರೀರಾಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಬಾಳೂರು ಹೋಬಳಿ ಕಸಾಪ ಪದಾಧಿಕಾರಿಗಳ ಸೇವಾದೀಕ್ಷೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಎರಡು ಮೂರು ವರ್ಷಗಳಿಂದ ಅತಿವೃಷ್ಟಿ ಹಾಗೂ ಕೋವಿಡ್ ಕಾರಣದಿಂದ ಮೂಡಿಗೆರೆಯಲ್ಲಿ ಸಾಹಿತ್ಯ ಕಾರ್ಯಕ್ರಮಗಳು ಕುಂಠಿತವಾಗಿದ್ದವು. ಮುಂದಿನ ದಿನಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಲಿ. ಮನಸ್ಸನ್ನು ಹಗುರಗೊಳಿಸುವ ಶಕ್ತಿ ಸಾಹಿತ್ಯಕ್ಕಿದ್ದು ಸಾಹಿತ್ಯದ ಸಾಮೀಪ್ಯ ಮನುಷ್ಯನನ್ನು ಸರಿ ದಾರಿಯಲ್ಲಿ ಕೊಂಡೊಯ್ಯುತ್ತದೆ ಎಂದರು.
ಬಾಳೂರು ಹೋಬಳಿ ಕಸಾಪ ಅಧ್ಯಕ್ಷ ರವಿ ಪಟೇಲ್ ಕೂವೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇರುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ಮಲೆನಾಡಿನ ಜಾನಪದ ಸೊಗಡಿನ ಹಿರಿಕರಿಗೆ ವೇದಿಕೆ ಒದಗಿಸುವ ಕಾರ್ಯವನ್ನು ಕಸಾಪ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಬಾಳೂರು ಹೋಬಳ ಕಸಾಪ ಪೂರ್ವಾಧ್ಯಕ್ಷ ಜೆ.ಆರ್.ಗಣಪತಿ ಆಚಾರ್, ಎಂ.ವಿ. ಚನ್ನಕೇಶವಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಹೆಚ್.ಎಂ.ಶಾಂತಕುಮಾರ್, ನಿಕಟಪೂರ್ವ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಸಾಹಿತಿಗಳಾದ ಡಾ.ಬಿ.ಶಿವಶಂಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಜಿಲ್ಲಾ ಸಂಚಾಲಕರಾದ ವಿಶಾಲ ನಾಗರಾಜ್, ಕಸಬಾ ಹೋಬಳಿ ಅಧ್ಯಕ್ಷ ಎಂ.ಎಸ್.ನಾಗರಾಜ್, ತಾಲ್ಲೂಕು ಗೌರವ ಕಾರ್ಯದರ್ಶಿ ಆರ್ ಪ್ರಕಾಶ್, ನಾರಾಯಣ್ ವಿ.ಪಿ, ಕಸಾಪ ಪದಾಧಿಕಾರಿಗಳಾದ ಲಕ್ಷ್ಮಣಗೌಡ, ಎಂ.ವಿ ಸೋಮೇಶ್,ಪರೀಕ್ಷಿತ್ ಜಾವಳಿ, ಮಂಜುನಾಥ್ ಮೇಲ್ಕುಡಿಗೆ, ಶಂಕರ್ ಮಾಸ್ಟರ್, ಹಸೈನಾರ್, ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ ಮುಂತಾದವರು ಇದ್ದರು.










