ಇಂದಿನಿಂದ ಮೂರು ದಿನ ಅಮಿತ್ ಶಾ ರಾಜ್ಯ ಪ್ರವಾಸ…

47
firstsuddi

ಮಂಡ್ಯ : ವಿಧಾನಸಭೆ ಚುನಾವಣೆಗೆ 4 ರಿಂದ 5 ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಮತಬೇಟೆ ಆರಂಭಿಸಿದೆ. ಇಂದಿನಿಂದ ಅಮಿತ್ ಶಾ ಮೂರು ದಿನಗಳ ಕಾಲ ರಾಜ್ಯಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿ ಶಾ ಪ್ರವಾಸದಿಂದಲೇ ಚುನಾವಣಾ ರಣತಂತ್ರವನ್ನು ಆರಂಭಿಸಿದೆ. ಮಂಡ್ಯದಿಂದಲೇ ಅಮಿತ್ ಶಾ ಚುನಾವಣೆಗೆ ರಣಕಹಳೆ ಊದಲಿದ್ದಾರೆ.

ಇಂದು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು ಅಂದೇ ರಾತ್ರಿ 10 ಗಂಟೆಗೆ ಯಲಹಂಕ ವಾಯುನೆಲೆಗೆ ಬಂದಿಳಿಯಲಿರುವ ಅಮಿತ್ ಶಾ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿ, ಮರುದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12.15ರವರೆಗೆ ಸಮಯ ಕಾಯ್ದಿರಿಸಿದ್ದಾರೆ. ಈ ಅವಧಿಯಲ್ಲಿ ರಾಜ್ಯದ ಪ್ರಮುಖ ಬಿಜೆಪಿ ನಾಯಕರು ಭೇಟಿಯಾಗುವ ಸಾಧ್ಯತೆ ಇದೆ.

ನಂತರ ಮಂಡ್ಯದ ಬಾಲಕರ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 1.45ರಿಂದ 3.15ರವರೆಗೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯಕ್ಕೆ ಅಧಿಕೃತ ಬುನಾದಿ ಹಾಕಲಿದ್ದಾರೆ. ಮಧ್ಯಾಹ್ನ 3.30ರಿಂದ ಸಂಜೆ 4.30ಕ್ಕೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಡೇರಿ ಉದ್ಘಾಟಿಸಿ, ಸಂಜೆ 4.50ಕ್ಕೆ ಮಂಡ್ಯದಿಂದ ವಿಮಾನದ ಮೂಲ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಸಂಜೆ 5.45ರಿಂದ 6.45ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಸಹಕಾರ ವಲಯದ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 8ರಿಂದ 9.30ರವರೆಗೆ ಪಕ್ಷದ ಮುಖಂಡರ ಜತೆ ಸಭೆ ನಡೆಸಲಿದ್ದಾರೆ. ಡಿ.31ರಂದು ಬೆಳಗ್ಗೆ 8.30ರಿಂದ 9.30ರವರೆಗೆ ರಾಜ್ಯ ನಾಯಕರ ಜೊತೆ ಉಪಾಹಾರ ಸೇವಿಸುತ್ತಾರೆ. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಆವತಿಯಲ್ಲಿ ಬೆಳಗ್ಗೆ 10.55ಕ್ಕೆ ನೆರವೇರುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬಳಿಕ ಮಧ್ಯಾಹ್ನ 1 ಗಂಟೆಗೆ ಮಲ್ಲೇಶ್ವರಂನಲ್ಲಿ ನಡೆಯುವ ಸೌಹಾರ್ದ ಸಹಕಾರ ಮಂಡಳಿ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3ರಿಂದ 4.30ರವರೆಗೆ ಬೆಂಗಳೂರಿನ ಬಿಜೆಪಿ ಬೂತ್ ಅಧ್ಯಕ್ಷರು, ಬೂತ್ ಏಜೆಂಟರ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ 7.10ಕ್ಕೆ ಯಲಹಂಕ ವಾಯುನೆಲೆಯಿಂದ ನವದೆಹಲಿಗೆ ತೆರಳಲಿದ್ದಾರೆ.