ನವದೆಹಲಿ : ರಾಜಸ್ಥಾನದ ಉದಯ್‍ಪುರದಲ್ಲಿ ಇಂದಿನಿಂದ 3 ದಿನಗಳ ಕಾಲ ಚಿಂತನ ಶಿಬಿರ ನಡೆಯಲಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯುವ ಚಿಂತನ ಶಿಬಿರದಲ್ಲಿ ರಾಹುಲ್ ಗಾಂಧಿ ಅವರು ಸೇರಿದಂತೆ 400ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮೊದಲ ದಿನವಾದ ಇಂದು ಸೋನಿಯಾ ಗಾಂಧಿ ಶಿಬಿರ ಉದ್ದೇಶಿಸಿ ಮಾತನಾಡಲಿದ್ದಾರೆ. ಕೊನೆಯ ದಿನ ಜನರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.
ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಎರಡು ಮುಖ್ಯ ವಿಷಯಗಳ ಬಗ್ಗೆ ಚರ್ಚೆ ಆಗುತ್ತದೆ ಎಂದು ತಿಳಿದುಬಂದಿದೆ. ಮೊದಲನೆಯದಾಗಿ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಹೇಗೆ ಸಜ್ಜಾಗಬೇಕು ಎಂದು. ಎರಡನೇಯದಾಗಿ 2024ರ ಲೋಕಸಭಾ ಚುನಾವಣೆಗೂ ಮೊದಲು ಬರುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ರಾಜಸ್ಥಾನಗಳ ವಿಧಾನಸಭಾ ಚುನಾವಣೆಗಳಿಗೆ ಯಾವ ರೀತಿಯ ಸನ್ನದ್ಧವಾಗಬೇಕು ಎಂದು.
ಚಿಂತನ ಶಿಬಿರದಲ್ಲಿ ನಾಯಕರು ಕೇಂದ್ರ-ರಾಜ್ಯ ಸಂಬಂಧ, ಈಶಾನ್ಯ ರಾಜ್ಯಗಳ ಪರಿಸ್ಥಿತಿ, ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಮತ್ತು ಕೋಮು ಧ್ರುವೀಕರಣದ ಬಗ್ಗೆ ಚರ್ಚಿಸಲಿದ್ದಾರೆ. ಇದರ ಜೊತೆಗೆ ರಾಜಕೀಯ, ಆರ್ಥಿಕ, ರೈತರು, ಯುವಜನತೆ ಮತ್ತು ಸಾಂಸ್ಥಿಕ ವಿಷಯಗಳ ಬಗೆಗೂ ಚರ್ಚಿಸುವ ಸಾಧ್ಯತೆಯಿದೆ.










