ರಾಯ್ಪುರ(ಛತ್ತೀಸ್‍ಗಢ): ಛತ್ತೀಸ್‍ಗಢದ ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲೆಟ್ ಸಾವನ್ನಪ್ಪಿದ್ದಾರೆ.
ದುರಂತದಲ್ಲಿ ಪೈಲಟ್ ಗಳಾದ ಕ್ಯಾಪ್ಟನ್ ಪಂಡಾ ಮತ್ತು ಕ್ಯಾಪ್ಟನ್ ಶ್ರೀವಾಸ್ತವ ಎಂಬುವರು ಸಾವನ್ನಪ್ಪಿದ್ದಾರೆ. ರಾಯ್‌ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದ ಅಭ್ಯಾಸದ ವೇಳೆ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಪ್ರಶಾಂತ್ ಅಗರವಾಲ್ ತಿಳಿಸಿದ್ದಾರೆ.
ಅಪಘಾತದ ಬಗ್ಗೆ ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಹೆಲಿಕಾಪ್ಟರ್ ಪತನವಾಗಿರುವುದು ದುಃಖದ ಸಂಗತಿಯಾಗಿದೆ. ನಮ್ಮ ಪೈಲಟ್ ಗಳಾದ ಕ್ಯಾಪ್ಟನ್ ಪಂಡಾ ಮತ್ತು ಕ್ಯಾಪ್ಟನ್ ಶ್ರೀವಾಸ್ತವ ಅವರು ನಿಧನರಾಗಿದ್ದು, ದೇವರು ಅವರ ಕುಟುಂಬ ಸದಸ್ಯರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.










