ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ.

50

ನವದೆಹಲಿ: ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ. ಅಧಿವೇಶನದಲ್ಲಿ ವಿವಿಧ ಮಸೂದೆಗಳನ್ನು ಮಂಡಿಸಲು ಆಡಳಿತಾರೂಢ ಎನ್‍ಡಿಎ ಸಜ್ಜಾಗಿದೆ. ಈ ಪೈಕಿ ವಕ್ಫ್ ಕಾಯಿದೆ (ತಿದ್ದುಪಡಿ) ಮಸೂದೆ ಪ್ರಮುಖವಾಗಿದೆ. ಪ್ರಸ್ತುತ ಅಧಿವೇಶನ ಡಿಸೆಂಬರ್ 20 ರವರೆಗೆ ಮುಂದುವರೆಯಲಿದೆ. ಮುಸಲ್ಮಾನ್ ವಕ್ಫ್ ರದ್ದು ಮಸೂದೆ, ಭಾರತೀಯ ವಾಯುಯಾನ್ ಮಸೂದೆ, ವಿಕೋಪ ನಿರ್ವಹಣಾ ತಿದ್ದುಪಡಿ ಮಸೂದೆ, ಬ್ಯಾಂಕಿಂಗ್ ತಿದ್ದುಪಡಿ ಕಾಯಿದೆಗಳು, ರೈಲ್ವೇ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ತಯಾರಿ ಮಾಡಿಕೊಂಡಿದೆ. ಈ ಎಲ್ಲಾ ವಿಷಯಗಳ ಕುರಿತು ನಿನ್ನೆ ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು, ಶಾಂತಿಯುತ ಅಧಿವೇಶವನಕ್ಕೆ ಕರೆ ನೀಡುತ್ತಾ, ಕೇಂದ್ರ ಸರ್ಕಾರ ಎಲ್ಲ ವಿಚಾರಗಳ ಕುರಿತು ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸರ್ವಪಕ್ಷ ಸಭೆ ನಡೆಯಿತು. ಈ ಸಭೆಯಲ್ಲಿ ಉಭಯ ಸದನಗಳ ಎಲ್ಲ ಪಕ್ಷಗಳ ಸಭಾ ನಾಯಕರು ಪಾಲ್ಗೊಂಡಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಚಳಿಗಾಲದ ಅಧಿವೇಶನಕ್ಕೂ ಮುನ್ನ ಇಂದು ಇಂಡಿಯಾ ಮೈತ್ರಿಕೂಟದ ನಾಯಕರು ಸಂಸತ್ ಭವನದಲ್ಲಿ ಸಭೆ ಸೇರಿ ಪ್ರತಿಪಕ್ಷಗಳ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇಂದು ಬೆಳಗ್ಗೆ 10ಕ್ಕೆ ಸಭೆ ನಡೆಯಲಿದೆ.