ಚಿಕ್ಕಮಗಳೂರು: ಇಂದಿನ ಇಂಜಿನಿಯರ್‌ಗಳು ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಆಶಾಕಿರಣ ಅಂದ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಸಲಹೆ ಮಾಡಿದರು.
ನಗರದ ಲಯನ್ಸ್ ಸೇವಾ ಭವನದಲ್ಲಿ ನಿನ್ನೆ ನಡೆದ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್.ಎಂ.ವಿಶ್ವೇಶ್ವರಯ್ಯನವರು ದೇಶದ ಮೊದಲ ಎಂಜಿನಿಯರ್, ಅವರು ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸಿದರು. ಅನೇಕ ಕಾರ್ಖಾನೆಗಳನ್ನು ಸ್ಥಾಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಅವರ ತಾಂತ್ರಿಕತೆ ಮತ್ತು ಕೌಶಲ್ಯಕ್ಕೆ ಇಡಿ ವಿಶ್ವವೇ ಬೆರಗಾಗಿದೆ ಎಂದರು.
ಇಂಜಿನಿಯರ್‌ಗಳು ದೇಶಕಟ್ಟುವ ಶಿಲ್ಪಿಗಳು, ಹಾಗಾಗಿ ಅವರು ಸರ್.ಎಂ.ವಿಶ್ವೇಶ್ವರಯ್ಯನವರ ತಾಂತ್ರಿಕತೆ ಮತ್ತು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಅವರು ಹಾಕಿ ಕೊಟ್ಟಿರುವ ಹಾದಿಯಲ್ಲೇ ಸಾಗಬೇಕು. ಅವರಂತೆ ದೇಶಕ್ಕಾಗಿ, ಸಮಾಜಕ್ಕಾಗಿ ದುಡಿಯಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ನೂತನ ಅಧ್ಯಕ್ಷ ಬಿ.ಎಂ.ಪ್ರಕಾಶ್ ಅವರ ತಂಡಕ್ಕೆ ನಿರ್ಗಮಿತ ಅಧ್ಯಕ್ಷ ಸಿ.ಪಿ.ಸುರೇಶ್ ಸಮಾರಂಭದಲ್ಲಿ ಅಧಿಕಾರವನ್ನು ಹಸ್ತಾಂತರಿಸಿದರು. ಹಿರಿಯ ಇಂಜಿನಿಯರ್ ಎಂ.ಎಸ್.ನಾಗೇಂದ್ರ ಪ್ರತಿಜ್ಞಾವಿಧಿ ಬೋಧಿಸಿದರು.
ನಿರ್ಗಮಿತ ಅಧ್ಯಕ್ಷ ಸಿ.ಪಿ.ಸುರೇಶ್ ಮಾತನಾಡಿ, ತಮ್ಮ ಅವಧಿಯಲ್ಲಿ ನಡೆಸಲಾದ ಸಾಮಾಜಿಕ ಸೇವಾ ಕಾರ್ಯಗಳು ತಮಗೆ ಅತ್ಯಂತ ತೃಪ್ತಿ ಮತ್ತು ಹೆಮ್ಮೆ ತಂದಿವೆ ಎಂದರು. ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದವರಿಗೆ ಧನ್ಯವಾದ ಅರ್ಪಿಸಿದರು.
ನೂತನ ಅಧ್ಯಕ್ಷ ಬಿ.ಎಂ.ಪ್ರಕಾಶ್ ಮಾತನಾಡಿ, ತಮ್ಮ ಅವಧಿಯಲ್ಲಿ ನಡೆಸಲಿರುವ ಕಾರ್ಯಕ್ರಮಗಳನ್ನು ವಿವರಿಸಿ, ಅದರ ಯಶಸ್ಸಿಗೆ ತಮ್ಮೊಂದಿಗೆ ಸಹಕರಿಸುವಂತೆ ಸದಸ್ಯರಿಗೆ ಮನವಿ ಮಾಡಿದರು.
ಆಶಾಕಿರಣ ಅಂದ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ, ಹಿರಿಯ ಇಂಜಿನಿಯರ್‌ಗಳಾದ ಎಸ್.ಆರ್.ಕಾಶೀಪ್ರಸಾದ್, ಬಿ.ಎನ್.ಮಲ್ಲೇಶ್ ಮತ್ತು ನಿರ್ಗಮಿತ ಅಧ್ಯಕ್ಷ ಸಿ.ಪಿ. ಸುರೇಶ್ ದಂಪತಿಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಸಂಘದ ನಿರ್ಗಮಿತ ಸಹ ಸಂಯೋಜಕ ಕೆ.ಎಸ್.ಸತೀಶ್, ಕಾರ್ಯದರ್ಶಿ ವಿ.ಟಿ.ನಿಂಗರಾಜು, ಖಜಾಂಚಿ ನಾಗೇಂದ್ರ ಪ್ರಸಾದ್, ನೂತನ ಕಾರ್ಯದರ್ಶಿ ಧನುಷ್ ಬೆನಕೇಗೌಡ, ಖಜಾಂಚಿ ಮಹಮ್ಮದ್ ಇರ್ಷಾದ್, ಇಂಜಿನಿಯರ್ ಮೋನಿಷಾ, ಡಾ.ಜ್ಯೋತಿ ಕೃಷ್ಣ ಉಪಸ್ಥಿತರಿದ್ದರು.










