ಇಂದು ಪಿಎಂ ಕಿಸಾನ್ ಯೋಜನೆಯಡಿ 10ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ ಮೋದಿ.

68
firstsuddi

ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ 10ನೇ ಕಂತಿನ ಹಣವನ್ನು ಇಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ.

ಇಂದು ಬಿಡುಗಡೆ ಮಾಡುತ್ತಿರುವ 10ನೇ ಕಂತು, ದೇಶದ ಸುಮಾರು 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವರ್ಗಾವಣೆ ಮಾಡುವ ಯೋಜನೆಯನ್ನು ಒಳಗೊಂಡಿದೆ. ಪಿಎಂ-ಕಿಸಾನ್ ಯೋಜನೆಯಡಿ ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ(ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ) ವರ್ಷಕ್ಕೆ 6,000 ರೂ. ಸಹಾಯ ಧನವನ್ನು ನೀಡಲಾಗುತ್ತದೆ. ತಲಾ 2,000 ರೂ.ಗಳನ್ನು ನಾಲ್ಕು-ಮಾಸಿಕ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 351 ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್ ಪಿಒ) 14 ಕೋಟಿ ರೂ.ಗಿಂತ ಹೆಚ್ಚಿನ ಇಕ್ವಿಟಿ ಅನುದಾನವನ್ನು ಬಿಡುಗಡೆ ಮಾಡಲಿದ್ದಾರೆ. ಇದರಿಂದ 1.24 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಲಿದೆ. ಇದೇ ವೇಳೆ ರೈತ ಉತ್ಪಾದನಾ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜತೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.