ನವದೆಹಲಿ: ಹೈಕಮಾಂಡ್ ಜೊತೆಗಿನ ಸಭೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಭೇಟಿಗೆ ಸಮಯ ಸಿಕ್ಕಿದ್ದು, ವಿವಿಧ ಯೋಜನೆಗಳಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನ ಬಿಡುಗಡೆ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ, ಪ್ರಧಾನಿ ಅವರನ್ನು ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.
ಕೇವಲ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಹ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ರಾಜ್ಯದಲ್ಲಿನ ಅನ್ನಭಾಗ್ಯದ ಪರಿಸ್ಥಿತಿ ಬಗ್ಗೆ ವಿವರಣೆ ಕೊಡಲಿರುವ ಸಿಎಂ ಸಿದ್ದರಾಮಯ್ಯ, ಅಕ್ಕಿ ಖರೀದಿಗೆ ರಾಜ್ಯದ ಪ್ರಯತ್ನ, ಅಕ್ಕಿ ಅಲಭ್ಯತೆ, ಅಕ್ಕಿ ಬದಲು ಹಣ ಕೊಡುತ್ತಿರುವ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಕೊಡಿಸುವಂತೆಯೂ ಮನವಿ ಮಾಡಲಿದ್ದಾರೆ.
ಇಂದು ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿಎಂ ಮನವಿಗೆ ಒಪ್ಪಿ ಬರ್ತ್‌ಡೇ ಗಿಫ್ಟ್ ಆಗಿ ಕೇಂದ್ರದಿಂದ ಹೆಚ್ಚುವರಿ ಅಕ್ಕಿಯನ್ನು ಪ್ರಧಾನಿ ಮೋದಿ ಕೊಡುತ್ತಾರಾ? ಅಥವಾ ಅಕ್ಕಿ ಕೊಡಲು ಒಪ್ಪದೇ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಕೊಟ್ಟಿದ್ದ ಕಾರಣವನ್ನೇ ಕೊಡುತ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.










