ಲಂಡನ್ : ಇಂದು ಬ್ರಿಟನ್ ರಾಣಿ ಎಲಿಜಬೆತ್ II ಅಂತ್ಯಕ್ರಿಯೆ ನೆರವೇರಲಿದ್ದು, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ವಿಶ್ವದ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲಿದ್ದಾರೆ.
ಬ್ರಿಟನ್ ಸಂಸತ್ ನ ವೆಸ್ಟ್ ಮಿನಿಸ್ಟರ್ ಹಾಲ್ ನಲ್ಲಿ ಇದೀಗ ರಾಣಿಯ ಪಾರ್ಥಿವ ಶರೀರದ ಪೆಟ್ಟಿಗೆ ಇರಿಸಲಾಗಿದೆ. ಇಂದು ಸಕಲ ರೀತಿಯ ಗೌರವಾರ್ಪಣೆಯ ಬಳಿಕ ರಾಣಿಯ ಮೃತದೇಹವಿರುವ ಪೆಟ್ಟಿಗೆಯನ್ನು ಮೆರವಣಿಗೆಯ ಮೂಲಕ ಲಂಡನ್ನಿನ ವೆಲ್ಲಿಂಗ್ಟನ್ ಆರ್ಚ್ ಗೆ ತರಲಾಗುತ್ತದೆ. ಮಧ್ಯರಾತ್ರಿ 12 ಗಂಟೆಗೆ ವೆಸ್ಟ್ ಮಿನಿಸ್ಟರ್ ಅಬ್ಬೆ ಚರ್ಚ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಎಲಿಜಬೆತ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಶನಿವಾರ ಸಂಜೆ ಆಗಮಿಸಿದ ಮುರ್ಮು, ನಿನ್ನೆ ರಾಣಿ ಅಂತಿಮ ದರ್ಶನ ಪಡೆದು, ಕಿಂಗ್ಸ್ ಚಾರ್ಲ್ಸ್ ಜೊತೆ ಮಾತನಾಡಿದರು. ಜೊತೆಗೆ ಭಾರತದ ಪರವಾಗಿ ಸಂತಾಪ ಸೂಚಕ ಪುಸ್ತಕದಲ್ಲಿ ಸಹಿ ಹಾಕಿದರು.
ಯುಕೆ ಹಾಗು ಕಾಮನ್ ವೆಲ್ತ್ ದೇಶಗಳ ಒಕ್ಕೂಟದ ಮಾಜಿ ಮುಖ್ಯಸ್ಥೆಯಾಗಿರುವ 2ನೇ ರಾಣಿ ಎಲಿಜಬೆತ್ ಸೆಪ್ಟೆಂಬರ್ 8 ರಂದು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದರು.










