ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ : ಪ್ರಧಾನಿ ಮೋದಿ.

111
firstsuddi

ನವದೆಹಲಿ : 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದರು. ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜಗತ್ತಿನಾದ್ಯಂತ ನಮ್ಮ ಭಾರತದ ಧ್ವಜ ಹಾರಾಡುತ್ತಿದೆ. ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ. ಇಡೀ ದೇಶ ಇಂದು ಹೊಸ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಭಾರತದ ಮೇಲಿನ ಪ್ರೀತಿಗಾಗಿ ತ್ಯಾಗ, ಬಲಿದಾನ ಮತ್ತು ದೇಶಕ್ಕಾಗಿ ಜೀವ ಕೊಟ್ಟವರನ್ನೂ ನಾವು ಎಂದಿಗೂ ಮರೆಯಬಾರದು. ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಬ್ರಿಟಿಷರ ಆಳ್ವಿಕೆಯ ಬುನಾದಿಯನ್ನೇ ಬುಡಮೇಲು ಮಾಡಿದ ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಈ ರಾಷ್ಟ್ರ ಕೃತಜ್ಞವಾಗಿದೆ. ದೇಶಕ್ಕಾಗಿ ಜೀವವನ್ನೇ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ ಅವರಿಗೆ ನಾಗರಿಕರು ನಮನ ಸಲ್ಲಿಸಬೇಕು. ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ಚೆನ್ನಮ್ಮ, ಬೇಗುನ್ ಹಜರತ್ ಮಹಲ್ ಸೇರಿದಂತೆ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಪ್ರತಿ ಭಾರತದ ಪ್ರಜೆಯೂ ಹೆಮ್ಮೆ ಪಡುತ್ತಾರೆ ಎಂದು ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೆಲ್ಲರ ಹೋರಾಟವನ್ನು ನೆನಪಿಸಿಕೊಂಡರು.

ಆಜಾದಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ನಮ್ಮ ಅನೇಕ ರಾಷ್ಟ್ರನಾಯಕರನ್ನು ಸ್ಮರಿಸಿದ್ದೇವೆ. ಆಗಸ್ಟ್ 14ರಂದು ನಾವು ದೇಶದ ವಿಭಜನೆಯ ಭೀಕರತೆಯನ್ನು ನೆನಪಿಸಿಕೊಂಡಿದ್ದೇವೆ. ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ಕೊಡುಗೆ ನೀಡಿದ ದೇಶದ ಎಲ್ಲಾ ನಾಗರಿಕರನ್ನು ಇಂದು ನೆನಪಿಸಿಕೊಳ್ಳುವ ದಿನವಾಗಿದೆ. ರಾಷ್ಟ್ರವು ಪ್ರಜಾಪ್ರಭುತ್ವದ ತಾಯಿಯನ್ನು ಉಳಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನು ಗುಲಾಮಗಿರಿಯ ಕುರುಹುಗಳಿಂದ ಮುಕ್ತಿ ಹೊಂದಬೇಕು ಹಾಗೂ ಎಲ್ಲರೂ ತಲೆ ಎತ್ತಿ ಬದುಕಬೇಕು ಎಂದು ಪ್ರತಿಪಾದಿಸಿದರು. ಇನ್ನು ದೇಶದ ಪರಂಪರೆ ಕಾಪಾಡಿಕೊಂಡು ಹೋಗುವುದು ಹಾಗೂ ನಮ್ಮ ಪರಂಪರೆಗೆ ಬೆಲೆ ಕೊಡುವುದು ಎಲ್ಲ ಜವಾಬ್ದಾರಿ ಎಂಬುದನ್ನು ಅಮೃತ ಮಹೋತ್ಸವದ ವೇಳೆ ಪ್ರಧಾನಿ ಎಲ್ಲ ನಾಗರಿಕರಿಗೆ ನೆನಪಿಸಿಕೊಟ್ಟರು.

ಸ್ವಾತಂತ್ರ್ಯದ ಬಳಿಕ ಸಾಕಷ್ಟು ಸಂಕಷ್ಟ ಎದುರಿಸಿದೆ. ಕೆಲವೊಮ್ಮೆ ಅನ್ನದ ಸಮಸ್ಯೆ, ಇನ್ನು ಕೆಲವೊಮ್ಮೆ ಯುದ್ಧ ಹೀಗೆ ಹಲವು ಸಂಕಷ್ಟಗಳ ನಡುವೆ ದೇಶ ಎದ್ದು ನಿಂತಿದೆ. ವಿವಿಧತೆಯಲ್ಲಿ ಏಕತೆ ಹೊಂದಿದೆ. ಪ್ರಜಾಪ್ರಭುತ್ವದ ತಾಯಿಯಾಗಿದೆ. ಸ್ವತಂತ್ರ ಸಿಕ್ಕಿದ ನಂತರ ಜನಿಸಿ ಪ್ರಧಾನಿಯಾದ ಮೊದಲ ವ್ಯಕ್ತಿ ನಾನು. ದೇಶದ ಜನರು ನನಗೆ ಆರ್ಶೀವಾದ ಮಾಡಿದರು. ದೇಶದ ನಿರೀಕ್ಷೆಗಳನ್ನು ಅರಿತು ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲ ವರ್ಗದ ಜನರ ಬಗ್ಗೆ ಚಿಂತಿಸುತ್ತಿದ್ದೇನೆ. ಮಹಾತ್ಮಾ ಗಾಂಧಿ ಅವರ ಚಿಂತನೆಯಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಬಗ್ಗೆ ಚಿಂತಿಸಿದ್ದೇನೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸುವಾಗ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂಬ ಪ್ರತಿಜ್ಞೆಯನ್ನು ಈಗಿನಿಂದಲೇ ತೆಗೆದುಕೊಳ್ಳುವಂತೆ ಯುವ ಜನತೆಗೆ ಪ್ರಧಾನಿ ಮೋದಿ ಮನವಿ ಮಾಡಿದರು.

5ಜಿ ಮೊಬೈಲ್ ಸೇವೆಗಳು ಭಾರತದಲ್ಲಿ ಪ್ರಾರಂಭವಾಗಲಿವೆ ಎಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಮೇಡ್-ಇನ್-ಇಂಡಿಯಾ’ ತಂತ್ರಜ್ಞಾನವು ನವ ಭಾರತದ ಸವಾಲುಗಳನ್ನು ಎದುರಿಸಲಿದೆ. ಮೊದಲ ಬಾರಿಗೆ ಭಾರತದ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಗಳನ್ನು ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದರು.

ಭ್ರಷ್ಟಾಚಾರ ದೇಶವನ್ನು ದುರ್ಬಲಗೊಳಿಸುತ್ತಿದೆ. ದೇಶ ಬಿಟ್ಟವರನ್ನು ವಾಪಸ್ ಕರೆತಂದು ಶಿಕ್ಷಿಸುವ ಕೆಲಸ ಮಾಡಲಾಗ್ತಿದೆ. ಭ್ರಷ್ಟಾಚಾರ ಮುಕ್ತ ಮಾಡಲು ನನಗೆ ಸಹಕಾರ ನೀಡಿ. ನಾನು 130 ಕೋಟಿ ಜನರ ಬೆಂಬಲ ಕೇಳುತ್ತಿದ್ದೇನೆ. ಭ್ರಷ್ಟಾಚಾರಿಗಳ ಓಲೈಕೆ ಅಂತ್ಯವಾಗಬೇಕಿದೆ. ಭ್ರಷ್ಟಾಚಾರಕ್ಕೆ ದೇಶದ ವಿರೋಧ ಇದೆ. ಕುಟುಂಬ ರಾಜಕಾರಣದಿಂದ ದೇಶಕ್ಕೆ ಯಾವುದೇ ಲಾಭವಿಲ್ಲ. ಕುಟುಂಬ ರಾಜಕಾರಣದಿಂದ ಕುಟುಂಬಕಷ್ಟೇ ಲಾಭ. ಮುಂದಿನ 25 ವರ್ಷಗಳನ್ನು ದೇಶದ ಅಭಿವೃದ್ಧಿಗೆ ಮುಡಿಪಾಗಿಡಲು ಯುವಜನರನ್ನು ನಾನು ಒತ್ತಾಯಿಸುತ್ತೇನೆ. ನಾವು ಇಡೀ ಮಾನವೀಯತೆಯ ಅಭಿವೃದ್ಧಿಗೆ ಸಹ ಶ್ರಮಿಸುತ್ತೇವೆ. ಅದು ಭಾರತದ ಶಕ್ತಿ ಎಂದು ಮೋದಿ ಹೇಳಿದರು.