75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ.. ಹುತಾತ್ಮ ಸೈನಿಕರ ಕುಟುಂಬಕ್ಕೆ ಹೊಸ ಯೋಜನೆ ಘೋಷಿಸಿದ ಸಿಎಂ.

101
firstsuddi

ಬೆಂಗಳೂರು : ನಗರದ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೋಟ್ಯಂತರ ಜನರು ಪಾಲ್ಗೊಂಡಿದ್ದರು. ಬದ್ಧತೆ ಹೋರಾಟದಿಂದ ಅತಿಶಕ್ತ ಬ್ರಿಟಿಷ್ ಸಾಮ್ರಾಜ್ಯವನ್ನು ಮಣಿಸಬಹುದು ಎಂಬುದನ್ನು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸಾಧಿಸಿ ತೋರಿಸಿದರು. ಬಹುತೇಕ ಹೋರಾಟಗಾರರು ಅನಾಮಧೇಯರಾಗಿಯೇ ಉಳಿದರು. ಅಂಥ ಅನಾಮಧೇಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಮರ್ಪಿಸುತ್ತಿದ್ದೇನೆ ಎಂದು ಹೇಳಿದರು.

ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರತರಾಗಿದ್ದಾಗ ಮೃತ ಪಟ್ಟರೆ ಅವರ ಕುಟುಂಬದ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು. ಯಾವುದೇ ಅಡೆತಡೆಯಾಗದೆಯೇ ಹುತಾತ್ಮ ಯೋಧರ ಮನೆ ಬಾಗಿಲಿಗೆ ಉದ್ಯೋಗದ ಆದೇಶ ಪ್ರತಿಯನ್ನು ಕಳುಹಿಸಲಾಗುವುದು. ಇದರ ಜೊತೆಗೆ ಹುತಾತ್ಮ ಸೈನಿಕರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು.

250 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುವುದಾಗಿ ಸಿಎಂ ಘೋಷಿಸಿದರು. ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸ್ವಚ್ಛ ಮತ್ತು ನೈರ್ಮಲ್ಯದ ವಾತಾವರಣವನ್ನು ಸೃಷ್ಟಿಸಲು, ಮುಂದಿನ ಆಗಸ್ಟ್ 15, 2023 ರೊಳಗೆ ಶೇ 100 ರಷ್ಟು ಶೌಚಾಲಯದ ಗುರಿಯನ್ನು ಸಾಧಿಸಲಾಗುವುದು ಎಂದು ಅವರು ಹೇಳಿದರು.

ಇದರೊಂದಿಗೆ, ಸಿಎಂ ಬೊಮ್ಮಾಯಿ ಭೂ ರಹಿತ ಕೃಷಿ ಕಾರ್ಮಿಕರಿಗೆ ರೈತ ವಿದ್ಯಾನಿಧಿ ನೀಡಲು ಯೋಜನೆ ಘೋಷಿಸಿದರು. ರೈತರ ಮಕ್ಕಳಿಗೆ ಜಾರಿಗೊಳಿಸಿರುವ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲ ಕರ್ಮಿಗಳಿಗೆ ತಲಾ 50 ಸಾವಿರ ರೂ.ಗಳ ವರೆಗೆ ಸಾಲ-ಸಹಾಯಧನ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದರು. ಇದೇ ವೇಳೆ ರಾಜ್ಯದಲ್ಲಿ ಹೊಸದಾಗಿ 4050 ಅಂಗನವಾಡಿ ತೆರೆಯಲಾಗುವುದು ಎಂದು ಸಿಎಂ ಘೋಷಿಸಿದರು.