ಬೆಂಗಳೂರು : ನೂತನ ಸಚಿವರ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇನ್ನೇನು ಸಚಿವರು ಪ್ರಮಾಣವಚನ ಸ್ವೀಕರಿಸೋದಷ್ಟೇ ಬಾಕಿ ಇದೆ. ಈಗಾಗಲೇ ಕೆಲ ಶಾಸಕರಿಗೆ ಪ್ರಮಾಣವಚನ ಸ್ವೀಕಾರಕ್ಕೆ ರೆಡಿಯಾಗುವಂತೆ ಸಿಎಂ ಸಂದೇಶ ರವಾನಿಸಿದ್ದಾರೆನ್ನಲಾಗಿದೆ. ನೂತನ ಸಚಿವ ಪ್ರಮಾಣವಚನಕ್ಕೆ ಮಧ್ಯಾಹ್ನ 2.15ರ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಇಂದು 11 ಗಂಟೆಗೆ ಅಥವಾ 11.30 ರ ಒಳಗೆ ಅಧಿಕೃತವಾಗಿ ರಾಜಭವನದಿಂದ ಪಟ್ಟಿ ಬಿಡುಗಡೆ ಆಗುತ್ತದೆ. ಮಧ್ಯಾಹ್ನ 2.15 ಕ್ಕೆ ನೂತನ ಸಚಿವರ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂತ್ರಿಸ್ಥಾನ ಯಾರಿಗೆ?
ಗೋವಿಂದ ಕಾರಜೋಳ, ಕೆ.ಎಸ್ ಈಶ್ವರಪ್ಪ, ಮುರುಗೇಶ್ ನಿರಾಣಿ, ಬಿ.ಸಿ ಪಾಟೀಲ್, ಬಿ.ಶ್ರೀರಾಮುಲು, ಶಂಕರ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಆಕಾಂಕ್ಷಿಗಳಿಗೆ ದೂರವಾಣಿ ಕರೆ ಹೋಗಿದೆ. ಇನ್ನು ಶಾಸಕರಾದ ಆರ್ ಅಶೋಕ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಡಾ.ಕೆ. ಸುಧಾಕರ್, ಪೂರ್ಣಿಮಾ ಶ್ರೀನಿವಾಸ್, ಅಶ್ವತ್ಥ್ ನಾರಾಯಣ, ಸೇರಿದಂತೆ ಹಲವರು ಸಿಎಂ ಕರೆಗಾಗಿ ಇನ್ನೂ ಕಾಯುತ್ತಾ ಕೂತಿದ್ದಾರೆ. ಪಟ್ಟಿ 11-11.30 ರ ವೇಳೆಗೆ ಬಿಡುಗಡೆಯಾಗಲಿದ್ದು, ಯಾರಿಗೆಲ್ಲಾ ಅವಕಾಶ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.










