ಇಂದು ರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟ – ಭಾರತದ 15ನೇ ರಾಷ್ಟ್ರಪತಿ ಯಾರಾಗಲಿದ್ದಾರೆ?

56
firstsuddi

ನವದೆಹಲಿ : ಬಹು ನಿರೀಕ್ಷಿತ ರಾಷ್ಟ್ರಪತಿ ಚುನಾವಣಾ ಫಲಿತಾಂಶಕ್ಕೆ ಇಡೀ ದೇಶದ ಜನ ಎದುರು ನೋಡುತ್ತಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ ನಂತರ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.

ದೇಶದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಜುಲೈ 18ರಂದು ಚುನಾವಣೆ ನಡೆದಿತ್ತು. ರಾಷ್ಟ್ರಪತಿ ಹುದ್ದೆಗೆ ಎನ್ ಡಿಎಯಿಂದ ದ್ರೌಪದಿ ಮುರ್ಮು, ವಿಪಕ್ಷಗಳಿಂದ ಯಶವಂತ್ ಸಿನ್ಹಾ ಅವರನ್ನ ಕಣಕ್ಕಿಳಿಸಲಾಗಿತ್ತು. ಲೆಕ್ಕಾಚಾರದ ಪ್ರಕಾರ ಎನ್ ಡಿಎ ಅಭ್ಯರ್ಥಿ, ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರ ಗೆಲುವು ಬಹುತೇಕ ಖಚಿತವಾಗಿದೆ. ಹೀಗಾಗಿ ಅವರ ತವರೂರಾದ ಒಡಿಶಾದ ರಾಯ್ ರಂಗಪುರ ರಂಗೇರಿದ್ದು, ಗೆಲುವಿನ ಸಂಭ್ರಮಾಚರಣೆಗೆ ಸಜ್ಜಾಗಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಪರ 44 ಪಕ್ಷಗಳಿದ್ರೆ, ಸಿನ್ಹಾ ಜೊತೆ 34 ಪಕ್ಷಗಳು ನಿಂತಿವೆ. ಎನ್ ಡಿಎ ಕೂಟದಲ್ಲಿಲ್ಲದ ಬಿಜೆಡಿ, ವೈಎಸ್ಆರ್ ಕಾಂಗ್ರೆಸ್, ಶಿವಸೇನೆ, ಜೆಎಂಎಂ, ಟಿಡಿಪಿ, ಬಿಎಸ್ಪಿಯಂತಹ ಪಕ್ಷಗಳು ಕೂಡ ಮುರ್ಮುಗೆ ಬೆಂಬಲ ಪ್ರಕಟಿಸಿವೆ. 64ರ ಹರೆಯದ ಮುರ್ಮು ಆಯ್ಕೆಯಾದರೆ ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಎರಡನೇ ಮಹಿಳೆ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಬುಡಕಟ್ಟು ಜನಾಂಗದ ನಾಯಕಯಾಗಿರುವ ದ್ರೌಪದಿ ಮುರ್ಮು ಈಗಾಗಲೇ ಜಾರ್ಖಂಡ್ ನಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಯಶವಂತ್ ಸಿನ್ಹಾ ಕೇಂದ್ರದಲ್ಲಿ ಎರಡು ಅವಧಿಯಲ್ಲಿ ಹಣಕಾಸು ಸಚಿವರಾಗಿ ಅನುಭವ ಹೊಂದಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರವಧಿ ಜುಲೈ 24ರಂದು ಮುಗಿಯಲಿದ್ದು, ನೂತನ ರಾಷ್ಟ್ರಪತಿ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.