ಇಡೀ ವಿಶ್ವವೇ ಮೆಚ್ಚಿರುವಂತಹ ಆದರ್ಶ ನಾಯಕ ಮೋದಿ : ಬಿಎಸ್‍ವೈ.

73
firstsuddi

ಶಿವಮೊಗ್ಗ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಡೀ ವಿಶ್ವವೇ ಮೆಚ್ಚಿರುವಂತಹ ಆದರ್ಶ ನಾಯಕರಾಗಿದ್ದಾರೆ. ಇಂದು ಶಿವಮೊಗ್ಗದ ವಿಮಾನ ನಿಲ್ದಾಣದ ಉದ್ಘಾಟನೆಗೆ ಬಂದಿರುವುದು ನಮಗೆ ಅತ್ಯಂತ ಸಂತಸ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಶಿವಮೊಗ್ಗದ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಟ್ಟ ಮಾತಿನಂತೆ ಏರ್ ಪೋರ್ಟ್ ಉದ್ಘಾಟನೆ ಮಾಡಿದ್ದಾರೆ. ಈ ದಿನ ಬಹಳ ವೈಶಿಷ್ಟ್ಯಪೂರ್ಣವಾದದ್ದು. ಮಲೆನಾಡು ಭಾಗದ ಜನರ ಕನಸು ನನಸಾಗುತ್ತಿರುವ ಶುಭ ಸಂಕೇತ. ಮೋದಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.

ನಾನು 2014ರಲ್ಲಿ ಪ್ರಧಾನಿ ಮೋದಿಯವರ ಒತ್ತಾಸೆ ಮೇರೆಗೆ ಶಿವಮೊಗ್ಗ ಲೋಕಸಭೆ ಚುನಾವಣೆಗೆ ನಿಂತಾಗ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ, ಜನ ಸೇವೆ ಮಾಡುವಂತಹ ಅವಕಾಶ ಮಾಡಿಕೊಟ್ಟಿದ್ದರು. 55 ವರ್ಷಗಳ ರಾಜಕೀಯ ಜೀವನದಲ್ಲಿ ನಾನು 7 ವರ್ಷ ಮಾತ್ರ ಅಧಿಕಾರದಲ್ಲಿದ್ದೆ. ಈ ಅವಧಿಯಲ್ಲಿ ನಾಡಿನಾದ್ಯಂತ ಸಂಚರಿಸಿ ಸರ್ವರಿಗೂ ಸಮಪಾಲು, ಸಮಬಾಳು ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಲಸ ಮಾಡಿದ್ದೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಜೀ ಅವರ ಆಶೀರ್ವಾದವೂ ಕಾರಣವಾಗಿದೆ ಎಂದು ಹೇಳಿದರು.