ಇದು ಯುದ್ಧದ ಸಮಯವಲ್ಲ ಎಂದು ಮೋದಿ ಹೇಳಿದ್ದು ಸರಿಯಾಗಿದೆ : ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್.

58
firstsuddi

ನ್ಯೂಯಾರ್ಕ್ : ಇದು ಯುದ್ಧದ ಸಮಯವಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ಸರಿಯಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧದ ಸಮಯವಲ್ಲ ಎಂದು ಹೇಳಿದ್ದು ಸರಿಯಾಗಿದೆ. ಇದು ಪಶ್ಚಿಮದ ದೇಶಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಲೀ ಅಥವಾ ಪೂರ್ವದ ವಿರುದ್ಧ ಪಶ್ಚಿಮವನ್ನು ಎತ್ತಿಕಟ್ಟುವುದಕ್ಕಾಗಲೀ ಅಲ್ಲ. ಇದು ವಿಶ್ವದ ಎಲ್ಲ ದೇಶಗಳಿಗೆ ಅನ್ವಯಿಸುವ ಸಮಾನ ಸಂಗತಿಯಾಗಿದೆ. ನಾವೆಲ್ಲರೂ ಜೊತೆಗೂಡಿ ಸವಾಲುಗಳನ್ನು ನಿಭಾಯಿಸಬೇಕು ಎಂದು ನಿನ್ನೆ ನ್ಯೂಯಾರ್ಕ್ ನಗರದಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಹಾಧಿವೇಶನದಲ್ಲಿ ಹೇಳಿದರು.

ಕಳೆದ ವಾರ ಉಜ್ಬೇಕಿಸ್ತಾನದ ಸಮರ್ ಖಂಡ್ ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ(ಎಸ್ ಸಿಒ) ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ ಅವರು, ಇದು ಯುದ್ಧದ ಸಮಯವಲ್ಲ. ಉಕ್ರೇನ್ ಜೊತೆಗಿನ ಸಂಘರ್ಷ ಕೊನೆಗೊಳಿಸಿ ಎಂದು ಕಿವಿಮಾತು ಹೇಳಿದ್ದರು. ಇದಕ್ಕೆ ಅಮೆರಿಕ ಸೇರಿದಂತೆ ಜಾಗತಿದ ಮಾಧ್ಯಮಗಳು ಮೆಚ್ಚುಗೆ ಸೂಚಿಸಿದ್ದವು.