ಇನ್ನು ಮುಂದೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪ್ರಯಾಣಿಸುವ ಪುರುಷ ಸವಾರರಿಗೆ ನಿರ್ಬಂಧ…

76
firstsuddi

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆ ಬಳಿಕ ಉಂಟಾದ ಉದ್ವಿಗ್ನ ಸ್ಥಿತಿಯೀಗ ಸಹಜ ಸ್ಥಿತಿಗೆ ಮರಳುತ್ತಿದ್ದು, ಪರಿಸ್ಥಿತಿ ಅವಲೋಕನ ಮಾಡಲು ಇಂದು ನಗರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಯಿತು. ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅಲೋಕ್ ಕುಮಾರ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ನೈಟ್ ಕರ್ಫ್ಯೂ ಇದೆ. ಇದು ಕೊನೆಗೊಂಡ ಬಳಿಕ ರಾತ್ರಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪ್ರಯಾಣಿಸುವ ಪುರುಷ ಸವಾರರಿಗೆ ನಿರ್ಬಂಧ ಹೇರಲಾಗುವುದು ಎಂದರು.

ಹಿರಿಯ ನಾಗರಿಕರು, ಮಕ್ಕಳಿಗೆ ಅವಕಾಶ ಇರುತ್ತದೆ. ಹಿಂಬದಿ ಸವಾರರಿಂದ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಈ ರೀತಿ ಹಿಂದೆ ಕೇರಳದ ವಯನಾಡಿನಲ್ಲಿ ಮಾಡಲಾಗಿತ್ತು. ಅಲ್ಲಿ ಎಲ್ಲಾ ಪುರುಷ ಸವಾರರಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಇಲ್ಲಿ ವಯಸ್ಕ ಪುರುಷರಿಗೆ ಮಾತ್ರ ನಿರ್ಬಂಧ ವಿಧಿಸಲಾಗುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.