ಭೂಪಾಲ್: ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದರು ಎಂಬ ಆರೋಪ ಮಾಡಿ ಇಬ್ಬರು ಯುವಕರ ಮುಖಕ್ಕೆ ಮಸಿ ಬಳಿದು, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ, ಅವರಿಗೆ ಮಲ ತಿನ್ನಿಸಿ ಮೆರವಣಿಗೆ ಮಾಡಿದ ಹೇಯ ಘಟನೆಯೊಂದು ಮಧ್ಯಪ್ರದೇಶದ ಶಿವಗಿರಿಯಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಯ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಅದಕ್ಕಿಂತ ಹೀನ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 7 ಜನರನ್ನು ಬಂಧಿಸಲಾಗಿದೆ.
23 ಮತ್ತು 24 ವರ್ಷ ವಯಸ್ಸಿನ ಇಬ್ಬರು ದಲಿತ ಯುವಕರು ಆರೋಪಿ ಕುಟುಂಬದ ಯುವತಿ(26) ಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಈ ವಿಷಯ ತಿಳಿದ ಮನೆಯವರು ಆ ಇಬ್ಬರು ಯುವಕರನ್ನು ಮನೆಗೆ ಕರೆಸುವಂತೆ ಯುವತಿಗೆ ಒತ್ತಾಯಿಸಿದ್ದಾರೆ. ಅದರಂತೆ ಯುವಕರು ಜೂನ್ 30ರಂದು ಯುವತಿಯ ಮನೆಗೆ ಬಂದಾಗ ಕುಟುಂಬಸ್ಥರೆಲ್ಲ ಸೇರಿಕೊಂಡು ಯುವಕರ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಕಪ್ಪು ಮಸಿ ಬಳಿದು, ಮಲವನ್ನು ತಿನ್ನುವಂತೆ ಒತ್ತಾಯಿಸಿ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ಎಸ್ಪಿ ಭಡೋರಿಯಾ ಹೇಳಿದರು.
ಆದರೆ ತಮ್ಮ ಮನೆಯ ಯುವತಿಗೆ ಕಿರುಕುಳ ನೀಡಿದ್ದಕ್ಕಾಗಿ ಮತ್ತು ಅನುಚಿತವಾಗಿ ಸ್ಪರ್ಶಿಸಿದ್ದಕ್ಕಾಗಿ ಇಬ್ಬರು ಯುವಕರನ್ನು ಥಳಿಸಿದ್ದಾಗಿ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಕುಟುಂಬದವರ ಹೇಳಿಕೆಗಳು ಸುಳ್ಳು ಎಂದು ಸಾಬೀತಾಗಿದ್ದು ಆರೋಪಿಗಳು ತಮ್ಮನ್ನು ಲೈಂಗಿಕ ಕಿರುಕುಳದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ದಲಿತ ಯುವಕರು ಕಣ್ಣೀರಿಟ್ಟಿದ್ದಾರೆ. ನಮ್ಮನ್ನು ಭೇಟಿಯಾಗಲು ಕರೆದ ನಂತರ ನಾವು ಅವರ ಮನೆಗೆ ಹೋದೆವು. ನಾವು ಯಾವುದೇ ಅಪರಾಧ ಮಾಡಿಲ್ಲ ಎಂದಿದ್ದಾರೆ.
ಮಧ್ಯಪ್ರದೇಶ ಸ್ಥಳೀಯ ಪೊಲೀಸರ ತನಿಖೆಯ ನಂತರ ಯುವಕರ ಮೇಲಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಆಧಾರ ರಹಿತವೆಂದು ದೃಢಪಡಿಸಿವೆ. ಆಸ್ತಿ ಸಂಬಂಧಿತ ವಿವಾದಕ್ಕೆ ಆರೋಪಿಗಳು ಹೀಗೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿ ಪ್ರಕರಣ ದಾಖಲಿಸಲು ಮತ್ತು ಅವರು ಅಕ್ರಮವಾಗಿ ನಿರ್ಮಿಸಿದ ಆಸ್ತಿಗಳನ್ನು ಕೆಡವಲು ಶಿವಪುರಿ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಘಟನೆಯನ್ನು ಖಂಡಿಸಿದ್ದಾರೆ.
ಅರಣ್ಯ, ಪೊಲೀಸ್ ಮತ್ತು ಜಿಲ್ಲಾಡಳಿತದ ಜಂಟಿ ತಂಡವು ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಲಾಗಿದೆ ಎಂಬ ಕಾರಣಕ್ಕಾಗಿ ಆರೋಪಿಗಳ ಕುಟುಂಬದ ಮೂರು ಮನೆಗಳನ್ನು ಭಾಗಶಃ ನೆಲಸಮಗೊಳಿಸಿದೆ.










